ಭಾರತ ರತ್ನ ಡಾ.ಅಬ್ದುಲ್ ಕಲಾಂ ನಮ್ಮೆಲ್ಲರ ಸ್ಪೂರ್ತಿಯ ಚಿಲುಮೆ

ಈ ಸುದ್ದಿಯನ್ನು ಶೇರ್ ಮಾಡಿ

ಡಾ.ಅಬ್ದುಲ್ ಕಲಾಂ ನಮ್ಮನ್ನು ಅಗಲಿ ಇಂದಿಗೆ ಐದು ವರ್ಷ ಸಂದಿದೆ. ಈ ಶ್ರೇಷ್ಠ ದಾರ್ಶನಿಕ ಮತ್ತು ಸಂತನ ನೆನಪಿಗಾಗಿ ನುಡಿ ನಮನಗಳು. ದೇಶ ಕಂಡ ಅಪ್ರತಿಮ ಮೇಧಾವಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರನ್ನು ಇನ್ನೂ ಸಾವಿರಾರು ವರ್ಷ ಯಾರೂ ಮರೆಯಲಾರರು.

ಭಾರತದ ಕ್ಷಿಪಣಿ ಪಿತಾಮಹಾ ಎಂದೇ ಕರೆಯುವ ಡಾ.ಕಲಾಂ ಅವರು ತಮಿಳುನಾಡಿನ ರಾಮೇಶ್ವರಂನಲ್ಲಿ ಅತ್ಯಂತ ಬಡತನದ ಮೀನುಗಾರರ ಕುಟುಂಬದಲ್ಲಿ ದಿನಾಂಕ 15-10-1931ರಂದು ಜನಿಸಿದರು. ಡಾ.ಅಬ್ದುಲ್ ಕಲಾಂ ಅವರು ನಡೆದು ಬಂದ ದಾರಿ ಹಾಗೂ ಅವರ ಬದುಕು ದೇಶದ ಇಡೀ ಛಯುವ ಜನಾಂಗಕ್ಕೆ ಸ್ಪೂರ್ತಿದಾಯಕವಾಗಿದೆ.

ಕಲಾಂ ಒಬ್ಬ ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿ ಆದರ್ಶ ಪ್ರಾಯರಾಗಿ ಯುವ ಜನಾಂಗದ ಕಣ್ಮಣಿಯಾಗಿದ್ದರು. ಇಂದಿಗೂ ಕಲಾಂರವರ ನಡೆ ನುಡಿ ಸಾಧನೆಗಳು, ಮಾರ್ಗ ದರ್ಶನ ಯುವಕರಿಗೆ ದಿಕ್ಸೂಚಿಯಾಗಿದೆ. ಹಳ್ಳಿಗಾಡಿನ ಒಬ್ಬ ಬಡ ಮೀನುಗಾರರ ಮಗ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ರಾಷ್ಟ್ರಪತಿಯಾಗುವುದು ಅಷ್ಟೊಂದು ಸುಲಭದ ಮಾತಲ್ಲ. ಡಾ.ಕಲಾಂ ಜೀವನದ ಕಠಿಣ ಪರಿಶ್ರಮ ಮತ್ತು ಅವರ ಧನಾತ್ಮಕ ಹೋರಾಟದ ಫಲವಾಗಿ ಯಾವುದೇ ಪ್ರಭಾವವಿಲ್ಲದೆ ಒಂದು ದೇಶದ ರಾಷ್ಟ್ರಪತಿ ಸ್ಥಾನ ಅಲಂಕರಿಸಿದರು.

ಡಾ.ಅಬ್ದುಲ್ ಕಲಾಂ ಅವರು ಸ್ವತಃ ಲೇಖಕರಾಗಿ, ಉಪನ್ಯಾಸಕರಾಗಿ, ಅಂತರಿಕ್ಷ ಇಂಜಿನಿಯರ್ ಆಗಿ, ಖ್ಯಾತ ವಿಜ್ಞಾನಿಗಳಾಗಿದ್ದರು. ಹಂತ ಹಂತವಾಗಿ ಸಾಧನೆಗಳ ಮೆಟ್ಟಿಲುಗಳನ್ನು ಏರಿ, ತಮ್ಮ ಅಪೂರ್ವ ಪ್ರತಿಭೆ ಅವರನ್ನು ಕೈ ಬೀಸಿ ಕರೆಯಿತು.

ಡಾ.ಕಲಾಂರವರ ಅಪ್ರತಿಮ ಪ್ರತಿಭೆಯನ್ನು ಗುರುತಿಸಿ ಭಾರತ ಸರ್ಕಾರ 1981 ರಲ್ಲಿ ಪದ್ಮಭೂಷಣ ಪ್ರಶಸ್ತಿ, 1990ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ಹಾಗೂ 1997ರಲ್ಲಿ ಅತ್ಯುನ್ನತ ಗೌರವ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತು. ಅಲ್ಲದೇ ದೇಶದ ನೂರಾರು ಪ್ರತಿಷ್ಠಿತ ಪ್ರಶಸ್ತಿಗಳು ಅವರನ್ನೇ ಹುಡುಕಿಕೊಂಡು ಬಂದವು. ಡಾ.ಅಬ್ದುಲ್ ಕಲಾಂ ಅವರನ್ನು ಭಾರತದ ಮಿಸೈಲï ಮ್ಯಾನ್ ಆಫ್ ಇಂಡಿಯಾ ಎಂದು ಕರೆಯುತ್ತಾರೆ.

ಡಾ.ಅಬ್ದುಲ್ ಕಲಾಂ ಅವರು ಕನಸನ್ನು ನನಸು ಮಾಡಬಲ್ಲಂತಹ ಅಪ್ರತಿಮ ಕನಸುಗಾರ ಎಂದರೆ ಅತಿಶಯೋಕ್ತಿ ಯಾಗಲಾರದು.ವಿಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟವಾದ ಛಾಪನ್ನು ಮೂಡಿಸಿದ ಪ್ರತಿಭಾವಂತ. ಡಾ.ಕಲಾಂ ನಡೆದು ಬಂದ ದಾರಿ ಆಲೋಚನೆಗಳು, ಚಿಂತನೆಗಳು ಅದರ ಜೊತೆಗೆ ತಕ್ಕ ಪರಿಶ್ರಮ ಅವರನ್ನು ಸಾಧನೆಯ ಉತ್ತುಂಗಕ್ಕೆ ಕೊಂಡೊಯ್ಯಿತು.

ಭಾರತವು ತನ್ನದೇ ಆದ ಸ್ಯಾಟಲೈಟ್ ಲಾಂಚ್ ವೆಹಿಕಲï (ಎಸ್‍ಎಲïವಿ) ಹೊಂದಬೇಕೆಂಬ ಬಹಳ ದಿನಗಳಿಂದ ಕನಸು ಕಾಣುತ್ತಿತ್ತು. ಡಾ.ಅಬ್ದುಲ್ ಕಲಾಂ ಅವರ ಕಠಿಣ ಪರಿಶ್ರಮ ಮತ್ತು ದಶಕಕ್ಕೂ ಹೆಚ್ಚು ಕಾಲ ಪರಿಣಾಮಕಾರಿ ಪ್ರಯತ್ನದ ಫಲವಾಗಿ ನಮ್ಮ ದೇಶವು ಮೊದಲ ಸ್ಥಳೀಯ ಎಸ್‍ಎಲïವಿ ಹೊಂದಲು ಸಾಧ್ಯವಾಯಿತು ಎಸ್‍ಎಲ್‍ವಿ – 3 ನ್ನು ಕಲಾಂರವರು ಅಭಿವೃದ್ಧಿ ಪಡಿಸಿದ್ದು ಇದನ್ನು ರೋಹಿಣಿ ಉಪಗ್ರಹವನ್ನು ಭೂಮಿಯ ಕಕ್ಷೆಗೆ ಉಡಾಯಿಸಲು ಬಳಸಲಾಗುತ್ತಿತ್ತು.ಇದು ಬಾಹ್ಯಾಕಾಶ ಕ್ಲಬï ಗೆ ಭಾರತದ ಪ್ರವೇಶವನ್ನು ಗುರುತಿಸಿದೆ.

ಡಾ.ಕಲಾಂರವರು ಎರಡು ದಶಕಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದಲ್ಲಿ ಕೆಲಸ ಮಾಡಿದ ನಂತರ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (ಡಿಆರ್‍ಡಿಒ) ಸ್ಥಳೀಯ ಮಾರ್ಗದರ್ಶಿ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ವಹಿಸಿದ್ದರು.

ಅಗ್ನಿ ಮತ್ತು ಪೃಥ್ವಿ ಕ್ಷಿಪಣಿಗಳ ಅಭಿವೃದ್ಧಿ ಮತ್ತು ಕಾರ್ಯಾಚರಣೆಯ ನೇತೃತ್ವವನ್ನು ವಹಿಸಿದ್ದರು.ಅವರನ್ನು ಭಾರತದ ಕ್ಷಿಪಣಿ ಮನುಷ್ಯ ಎಂದು ಕರೆಯುತ್ತಾರೆ. ಹೀಗೆ ವೈಜ್ಞಾನಿಕಕ ಕ್ಷೇತ್ರಗಳಲ್ಲಿ ಇನ್ನೂ ಹತ್ತು ಹಲವಾರು ಸಾಧನೆ ಮಾಡಿದ ಕೀರ್ತಿ ಡಾ.ಕಲಾಂ ಅವರಿಗೆ ಸಲ್ಲುತ್ತದೆ. ಡಾ.ಅಬ್ದುಲ್ ಕಲಾಂ ಅವರು ಬಾಹ್ಯಾಕಾಶ ವಿಜ್ಞಾನಿಯಾಗಿ ಮತ್ತು ನುರಿತ ಉಪನ್ಯಾಸಕರಾಗಿದ್ದರು.

1992 ಮತ್ತು 1999ರ ನಡುವೆ ಪೋ ಕ್ರಾನ್‍ನಲ್ಲಿ ಪರಮಾಣು ಪರೀಕ್ಷೆ ಸಂದರ್ಭದಲ್ಲಿ ಅವರು ಭಾರತದ ರಕ್ಷಣಾ ಸಚಿವರ ವೈಜ್ಞಾನಿಕಕ ಸಲಹೆಗಾರರಾಗಿದ್ದರು. ಭವ್ಯ ಭಾರತದ ಉಜ್ವಲ ಭವಿಷ್ಯದ ಬಗ್ಗೆ ಅದೆಷ್ಟೋ ಕನಸುಗಳನ್ನು ಕಂಡ ಡಾ.ಕಲಾಂರವರು ಅದನ್ನು ನನಸಾಗಿಸಿಕೊಳ್ಳಲು ಅಗ್ನಿಯ ರೆಕ್ಕೆ ( ವಿಂಗ್ಸ್ ಆಫ್ ಫೈರ್) ಗಳನ್ನು ಕಟ್ಟಿಕೊಂಡು ಕ್ಷಿಪಣಿಯಂತೆ ಮುಗಲಿನತ್ತ ಸಾಗಿದವರಾಗಿದ್ದರು.

ಡಾ.ಅಬ್ದುಲ್ ಕಲಾಂ ಅವರು ದಿನಾಂಕ : 25-7-2002ರಿಂದ 25-7-2007 ರವರೆಗೆ ಭಾರತದ 11ನೇಯ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ತಮ್ಮ ದಕ್ಷತೆ, ಸರಳತೆ, ಪ್ರಾಮಾಣಿಕತೆ ಮತ್ತು ಅಪಾರ ವಿದ್ವತ್ತುಗಳ ನೆಲೆಯಲ್ಲಿ ರಾಷ್ಟ್ರಪತಿ ಹುದ್ದೆಯ ಗೌರವ ಮತ್ತು ಘನತೆಯನ್ನು ಹೆಚ್ಚಿಸಿದರು. ಜನ ಸಾಮಾನ್ಯರ ರಾಷ್ಟ್ರಪತಿ ಎಂಬ ಕೀರ್ತಿಗೆ ಪಾತ್ರರಾದರು.

ಡಾ.ಅಬ್ದುಲ್ ಕಲಾಂರವರು ಶಾಲಾ ಕಾಲೇಜಿನ ವಿದ್ಯಾರ್ಥಿಗಳ ಪ್ರೀತಿ ಪಾತ್ರ ರಾಗಿದ್ದರು. ವಿದ್ಯಾರ್ಥಿಗಳಿಗೆ ಸುಮಾರು ನೂರಕ್ಕೂ ಹೆಚ್ಚು ಅದ್ಭುತವಾದ ಉಪನ್ಯಾಸ ನೀಡಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಸಂವಾದ ಎಂದರೆ ಇವರಿಗೆ ಅಚ್ಚುಮೆಚ್ಚಾಗಿತ್ತು.ಅವರಿಗೆ ಮಕ್ಕಳೆಂದರೆ ಬಹಳಷ್ಟು ಪ್ರೀತಿ. ಮಕ್ಕಳೊಂದಿಗೆ ಬೆರೆತು ಉಪಯುಕ್ತವಾದ ಸಲಹೆ ಮತ್ತು ಸೂಚನೆ ನೀಡುವುದು ಇವರ ಪ್ರಿಯವಾದ ಹವ್ಯಾಸವಾಗಿದೆ.

ಡಾ.ಕಲಾಂರವರು ಜೀವನದಲ್ಲಿ ವಿರುದ್ಧ ಪರಿಸ್ಥಿತಿಗಳ ನಡುವೆಯೂ ಸಾಧನೆಯ ತುಟ್ಟತುದಿಯನ್ನು ತಲುಪುವಲ್ಲಿ ಸಫಲರಾದರು. ವಿಶ್ವದ ಕೆಲವೇ ಜನರು ತಲುಪಲು ಸಾಧ್ಯವಾಗುವ ಹಂತವನ್ನು ತಲುಪಿದರು.
ಡಾ.ಅಬ್ದುಲ್ ಕಲಾಂರವರು ವಿಶೇಷವಾಗಿ ಯುವ ಪೀಳಿಗೆಯನ್ನು ಪ್ರೇರೇಪಿಸಲು ಚೈತನ್ಯದಾಯಕ ಮಾತುಗಳನ್ನಾಡಿ ಅವರ ಮನಸ್ಸಿನ ಚಂಚಲತೆಯನ್ನು ಹೋಗಲಾಡಿಸಿ ಏಕಾಗ್ರತೆ ಮೂಡಿಸಿ, ಬದುಕನ್ನು ರೂಪಿಸಿಕೊಳ್ಳಲು ಅದಮ್ಯ ಉತ್ಸಾಹ ತುಂಬಿದ್ದಾರೆ.

ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಡಾ.ಕಲಾಂ ರವರ ಸಂವಾದಗಳಲ್ಲಿ ಭಾಗವಹಿಸಿ ಬಹುತೇಕರು ಬದುಕಿನ ಗುರಿಯನ್ನು ತಲಪಿದ್ದಾರೆ ಎಂದರೆ ಖಂಡಿತಾ ಉತ್ಪ್ರೇಕ್ಷೆ ಯಾಗಲಾರದು. ಕಲಾಂರವರ ಮಾತಿನ ಲಹರಿಗೆ ಮಾರು ಹೋಗದ ವಿದ್ಯಾರ್ಥಿಗಳೇ ಇಲ್ಲ. ಅವರ ಬದುಕಿನ ಯಶಸ್ಸಿನ ಸಾಧನೆಗಳು ಯುವಕರು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಹವಣಿಸುವ ಮನಸ್ಸುಗಳಿಗೆ ಸ್ಫೂರ್ತಿಯಾಗಿವೆ.

ಭವ್ಯ ಭಾರತದ ಬಗ್ಗೆ ಅದೆಷ್ಟೋ ಕನಸುಗಳನ್ನು ಕಂಡ ಅವರು ಶಿಕ್ಷಣದ ಮಹತ್ವವನ್ನು ಇಡೀ ದೇಶಕ್ಕೆ ಸಾರಿದರು. ಡಾ.ಎಪಿಜೆ ಅಬ್ದುಲ್ ಕಲಾಂರವರ ಸ್ಪೂರ್ತಿದಾಯಕ ನುಡಿ ಮುತ್ತುಗಳು ಇಂದಿನ ಯುವ ಜನಾಂಗದ ಬದುಕಿನ ದಾರಿ ದಿಕ್ಸೂಚಿಯಾಗಿದೆ.

ಪೊಲೀಸ್ ವೃತ್ತಿ ಬದುಕಿನಲ್ಲಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರೊಂದಿಗೆ ಕಳೆದ ಕೆಲ ಕ್ಷಣ : ನನ್ನ ವೃತ್ತಿ ಬದುಕಿನಲ್ಲಿ ದಾವಣಗೆರೆ ಕೇಂದ್ರ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ 2005 ರಲ್ಲಿ ಅತ್ಯುತ್ತಮ ಸೇವೆಗಾಗಿ ಮಾನ್ಯ ರಾಷ್ಟ್ರಪತಿಯವರ ಶ್ಲಾಘನೀಯ ಸೇವಾ ಪದಕ ಪುರಸ್ಕøತನಾಗಿದ್ದು, ನನಗೆ ಅತ್ಯಂತ ಸಂತಸ ತಂದಿತ್ತು.

2006 ರಲ್ಲಿ ಬೆಂಗಳೂರಿನ ಗಾಜಿನ ಮನೆ, ರಾಜ ಭವನದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅಂದಿನ ಭಾರತದ ಸನ್ಮಾನ್ಯ ರಾಷ್ಟ್ರಪತಿಗಳಾದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಪರವಾಗಿ ಅಂದಿನ ಕರ್ನಾಟಕ ರಾಜ್ಯದ ಅಂದಿನ ರಾಜ್ಯಪಾಲರಾದ ಟಿ.ಎನ್. ಚತುರ್ವೇದಿಯವರು ಪ್ರಶಸ್ತಿ ಪತ್ರ ಹಾಗೂ ಪದಕವನ್ನು ವಿತರಿಸಿದರು.

ರಾಜ್ಯಪಾಲರು ನೀಡಿದ ಪ್ರಶಸ್ತಿ ಪತ್ರದಲ್ಲಿ ಅಂದಿನ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂರವರು ಸಹಿ ಹಾಕಿದ್ದರು. ಡಾ.ಅಬ್ದುಲ್ ಕಲಾಂ ರವರೇ ಪ್ರಶಸ್ತಿ ಹಾಗೂ ಪದಕ ಪ್ರದಾನ ಮಾಡಿದ್ದರೆ ಎಷ್ಟೊಂದು ಚೆನ್ನಾಗಿರುತ್ತಿತ್ತು ಎಂದು ಮನಸ್ಸಿನಲ್ಲಿಯೇ ಅಂದುಕೊಂಡಿದ್ದೆ.

ಭಾರತ ಕಂಡ ಅಪ್ರತಿಮ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂರವರಿಂದ ಪ್ರಶಸ್ತಿ ಹಾಗೂ ಪದಕ ಪಡೆಯುವುದು ಅತ್ಯಂತ ಅವಿಸ್ಮರಣೀಯ ಹಾಗೂ ನನ್ನ ಪಾಲಿನ ಸೌಭಾಗ್ಯ ಎಂದು ಭಾವಿಸಿದ್ದೆ.ಅವರಿಂದ ಪಡೆಯುವ ಅಪೂರ್ವ ಸುಂದರ ಕ್ಷಣಗಳನ್ನು ಫೋಟೋ ತೆಗೆಸಬಹುದಿತ್ತು ಎನ್ನುವ ಮಹದಾಸೆ ಇತ್ತು. ಆದರೆ ಆ ಸೌಭಾಗ್ಯ ನನಗೆ ಒದಗಿ ಬರಲಿಲ್ಲವಲ್ಲವೆಂಬ ದೊಡ್ಡ ಕೊರಗು ಮನಸ್ಸಿನಲ್ಲಿ ಇತ್ತು.

ನಂತರ ನಾನು ದಿನಾಂಕ 08-07-2009 ರಿಂದ 08-08-2012 ರವರೆಗೆ ದಾವಣಗೆರೆ ಗ್ರಾಮಾಂತರ ವೃತ್ತದಲ್ಲಿ ಸರ್ಕಲï ಇನ್ಸ್‍ಪೆಕಟರ್ ಆಫ್ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸಿದ್ದೇನೆ. ಈ ಅವಧಿಯಲ್ಲಿ ದಿನಾಂಕ 17-3-2012 ಮತ್ತು 18-3-2012 ರಂದು ಭಾರತದ ಗೌರವಾನ್ವಿತ ಮಾಜಿ ರಾಷ್ಟ್ರಪತಿ ಹಾಗೂ ಅಂತರರಾಷ್ಟ್ರೀಯ ಖ್ಯಾತ ವಿಜ್ಞಾನಿಗಳಾದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂರವರು ದಾವಣಗೆರೆ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ್ದು, ಅವರಿಗೆ ಜಡ್ಜ್ + ಶ್ರೇಣಿಯ ಭದ್ರತೆ ಒದಗಸಲಾಗಿತ್ತು.

ಆಗಿನ ಪೊಲೀಸ್ ಅಧೀಕ್ಷಕರು ನನಗೆ ಮಾನ್ಯರು ತಂಗುವ ಸ್ಥಳ ಹಾಗೂ ದಾವಣಗೆರೆ ವಿಶ್ವವಿದ್ಯಾಲಯದ ಸಮಾರಂಭದ ಸ್ಥಳದ ಬಂದೋಬಸ್ತ್ ಉಸ್ತುವಾರಿ ಬಗ್ಗೆ ನಿಗಾ ವಹಿಸಲು ಸೂಚನೆ ನೀಡಿದ್ದರು. ಡಾ.ಕಲಾಂ ರವರು ದಿನಾಂಕ : 17-3-2012 ರಂದು ಸಂಜೆ ಸುಮಾರು 5-30 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ಸಮೀಪ ಇರುವ ಸರ್ಕಾರಿ ಸಕ್ರ್ಯೂಯೂಟ್ ಹೌಸ್‍ಗೆ ಆಗಮಿಸಿದರು. ನಾನು ಅಲ್ಲಿಗೆ ಭೇಟಿ ನೀಡಿ ಜಿಲ್ಲಾ ಸಶಸ್ತ್ರ ಪಡೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕರ್ತವ್ಯದ ಬಗ್ಗೆ ಸೂಕ್ತ ಸೂಚನೆ ನೀಡಿದೆನು.

ನಂತರ ಮಾರನೆಯ ದಿನ ಬೆಳಿಗ್ಗೆ ಸಕ್ರ್ಯೂಯೂಟ್ ಹೌಸ್ ಭೇಟಿ ನೀಡಿದೆನು. ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಬಾಪೂಜಿ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವಿತ್ತು. ಬೆಳಿಗ್ಗೆ 9.50 ಗಂಟೆಗೆ ಡಾ.ಅಬ್ದುಲ್ ಕಲಾಂ ಅವರು ಸೂಕ್ತ ಗಣ್ಯರ ಕಾನ್ವಾಯï ಜೊತೆಗೆ ಹೊರಟು 10 ಗಂಟೆಗೆ ಸಭಾಂಗಣ ತಲುಪಿದವರು.ನಂತರ ಅಲ್ಲಿಂದ ಸುಮಾರು 11 ಗಂಟೆಗೆ ಅಲ್ಲಿಂದ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಕಾನ್ವಾಯï ಜೊತೆಗೆ ಹೊರಟು ಸುಮಾರು 11-30 ಗಂಟೆಗೆ ತಲುಪಿದರು.

ದಾವಣಗೆರೆ ಶಿವಗಂಗೋತ್ರಿ ಕ್ಯಾಂಪಸ್ ಹೊರಗಡೆ ಹಾಗೂ ಒಳ ಭಾಗದ ಸಭಾಂಗಣದಲ್ಲಿ ಸೂಕ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಿ ಕರ್ತವ್ಯ ನಿರ್ವಹಣೆ ಬಗ್ಗೆ ಸೂಕ್ತ ಸೂಚನೆಗಳನ್ನು ಅಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು. ನಂತರ ವಿದ್ಯಾರ್ಥಿಗಳೊಂದಿಗೆ ಅರ್ಥಪೂರ್ಣವಾಗಿ ಸಂವಾದ ನಡೆಸಿದರು.ಬೆಂಗಳೂರು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನೆರೆದ ವಿದ್ಯಾರ್ಥಿಗಳಿಗೆ ಅದ್ಭುತವಾದ ಪ್ರೇರಣೆ ನೀಡಿದರು. ಅಲ್ಲಿನ ವಿದ್ಯಾರ್ಥಿಗಳು ಅತ್ಯಂತ ಸಂತಸ ಪಟ್ಟರು. ಕಾರ್ಯಕ್ರಮ ಮುಗಿದ ಬಳಿಕ ಮಧ್ಯಾಹ್ನ 1 ಗಂಟೆಗೆ ಅಲ್ಲಿಂದ ಹೊರಟು ಸಕ್ರ್ಯೂಯೂಟ್ ಹೌಸ್ ಬಳಿ ತಲುಪಿದರು.

ಅವರೊಂದಿಗೆ ಸಕ್ರ್ಯೂಯೂಟ್ ಹೌಸ್ ಮುಖ್ಯ ದ್ವಾರದ ಕಡೆ ನಡೆದು ಕೊಂಡು ಹೋಗುವಾಗ ಅವರ ಪಕ್ಕದ ಎಡ ಭಾಗದಲ್ಲಿ ನಾನು ಇದ್ದೆ ನನ್ನ ಬಲ ಕೈಯಲ್ಲಿ ಟೀಕ್ ಮರದ ಬ್ಯಾಟನ್ ಇತ್ತು. ಆಗ ಡಾ.ಅಬ್ದುಲ್ ಕಲಾಂ ಅವರು ಒಮ್ಮೆಲೇ ನಿಂತು, ನನ್ನ ಬಲ ಕೈಯನ್ನು ನೋಡಿ ಏನಿದು ಎಂದು ನಗತ್ತಲೇ ಕೇಳಿದರು. ಅದಕ್ಕೆ ನಾನು ಇದು ಬ್ಯಾಟನ್ ಸರ್‍ಎಂದು ಉತ್ತರಿಸಿದೆನು, ನಂತರ ಇದನ್ನು ಏಕೆ ಹಿಡಿದು ಕೊಂಡಿದ್ದೀರಿ ಎಂದು ಕೇಳಿದರು.

ಅದಕ್ಕೆ ನಾನು ಇದು ನಮ್ಮ ಸಮವಸ್ತ್ರದ ಭಾಗ ಸರ್ ಎಂದು ಉತ್ತರಿಸಿದೆನು.ಅದಕ್ಕೆ ಅವರು ನಗುತ್ತಲೇ ತುಂಬಾ ಚೆನ್ನಾಗಿದೆ ಎನ್ನುತ್ತಾ ಸಕ್ರ್ಯೂಯೂಟ್ ಹೌಸ್ ಮುಖ್ಯ ದ್ವಾರದ ಒಳಗಡೆ ಹೋದರು. ದೇಶದ ಮಾಜಿ ರಾಷ್ಟ್ರಪತಿ ಹಾಗೂ ಶ್ರೇಷ್ಠ ವಿಜ್ಞಾನಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂರವರು ನನ್ನೊಂದಿಗೆ ಮಾತನಾಡಿದ ಆ ಕ್ಷಣ ನನಗೆ ಆದ ಸಂತೋಷ ಅಷ್ಟಿಷ್ಟಲ್ಲ. ಅದೊಂದು ನನ್ನ ವೃತ್ತಿ ಬದುಕಿನ ಸಾರ್ಥಕ ಕ್ಷಣ ಎಂದು ಭಾವಿಸಿದೆ. ನಾನು 2006ರಲ್ಲಿ ಅಂದುಕೊಂಡಂತಹ ದೊಡ್ಡ ಕನಸು ನನಸಾಯಿತು. ನಂತರ ಡಾ.ಕಲಾಂ ಅವರು ಮಧ್ಯಾಹ್ನ ಸಕ್ರ್ಯೂಯೂಟ್ ಹೌಸ್‍ನಲ್ಲಿ ಊಟ ಮಾಡಿ ಸ್ವಲ್ಪ ವಿಶ್ರಾಂತಿ ಪಡೆದು ಮಧ್ಯಾಹ್ನ 3 ಗಂಟೆಗೆ ಕಾರಿನಲ್ಲಿ ಕಾನ್ವಾಯï ಜೊತೆಗೆ ಹರಿಹರ ಹೆಲಿಪ್ಯಾಡ್‍ಗೆ ಹೊರಟರು.

ಡಾ.ಎಪಿಜೆ ಅಬ್ದುಲ್ ಕಲಾಂ ರವರಂತಹ ಮೇಧಾವಿ, ವಿದ್ವಾಂಸ, ಖ್ಯಾತ ವಿಜ್ಞಾನಿ, ಉಪನ್ಯಾಸಕ, ಲೇಖಕ, ಅಂತರಿಕ್ಷಯಾನ ಇಂಜಿನಿಯರ್, ದಾರ್ಶನಿಕ ಹಾಗೂ ಶ್ರೇಷ್ಠ ಸಂತರೊಬ್ಬರನ್ನು ನಾವು ಮತ್ತೆಂದೂ ದೇಶದ ರಾಷ್ಟ್ರಪತಿಗಳನ್ನಾಗಿ ಪಡೆಯಲು ಸಾಧ್ಯವಾಗುವುದಿಲ್ಲವೇನೋ ಎಂದು ಅನಿಸುತ್ತದೆ. ದೇಶದ ನಮ್ಮೆಲ್ಲರ ಕಣ್ಮಣಿ ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರು ಜುಲೈ 27 ರ, 2015 ರಂದು ಶಿಲ್ಲಾಂಗ್ ಇಂಡಿಯನ್ ಇನ್ಸಿಟ್ಯೂಟ್ ಆಫ್ ಮ್ಯಾನೇಜï ಮೆಂಟ್ (ಐಐಎಂ) ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡು ನೀಡುತ್ತಲೇ ವೇದಿಕೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದರು.

ಅವರು ವಿದ್ಯಾರ್ಥಿಗಳೊಂದಿಗೆ ಕಳೆದ ಪ್ರತಿ ಕ್ಷಣದ ಸಂತಸವನ್ನು ಮನಸಾರೆ ಅನುಭವಿಸಿದ್ದಾರೆ. ಇದನ್ನು ಪ್ರಾಯಶಃ ವರ್ಣಿಸಲು ಸಾಧ್ಯವಿಲ್ಲ. ನಂತರ ಅವರು ಅಸ್ತಂಗತರಾದ ಸುದ್ದಿ ಇಡೀ ಜಗತ್ತಿಗೆ ಬರಸಿಡಿಲಿನಂತೆ ಬಡಿದು ಇಡೀ ದೇಶವೇ ಶೋಕ ಸಾಗರದಲ್ಲಿ ಮುಳುಗಿತು.ಅವರು ನಮ್ಮನ್ನು ಅಗಲಿ ಇಂದಿಗೆ ಸರಿಯಾಗಿ ಐದು ವರ್ಷ ಕಳೆದಿದೆ. ಸಾವಿರಾರು ವರ್ಷಗಳೇ ಕಳೆದರೂ ಈ ದೇಶ ಡಾ.ಕಲಾಂ ಅವರನ್ನು ಮರೆಯಲು ಖಂಡಿತಾ ಸಾಧ್ಯವೇ ಇಲ್ಲ. ಇಂದು ಮತ್ತೊಮ್ಮೆ ನನ್ನ ಮನದಾಳದ ನುಡಿ ನಮನಗಳನ್ನು ದಿವ್ಯ ಚೇತನ ಪೂಜ್ಯ ಡಾ.ಕಲಾಂ ರವರಿಗೆ ಅರ್ಪಿಸುತ್ತೇನೆ.

Facebook Comments

Sri Raghav

Admin