ಹುಳಿಮಾವು ಕೆರೆ ದುರಂತ : ಪರಿಹಾರ 1 ಲಕ್ಷಕ್ಕೆ ಏರಿಸಲು ವಾಜಿದ್ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.27- ಹುಳಿಮಾವು ಕೆರೆ ಕೋಡಿ ಒಡೆಯಲು ಕಾರಣರಾದ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಬೇಕು ಹಾಗೂ ಸಂತ್ರಸ್ತರಿಗೆ 50 ಸಾವಿರ ಬದಲಿಗೆ ಒಂದು ಲಕ್ಷ ರೂ. ಪರಿಹಾರ ನೀಡಬೇಕೆಂದು ಬಿಬಿಎಂಪಿ ಪ್ರತಿಪಕ್ಷದ ನಾಯಕ ಅಬ್ದುಲ್ ವಾಜಿದ್ ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬಿಬಿಎಂಪಿ, ಬಿಡಿಎ ಮತ್ತು ಬಿಡಬ್ಲ್ಯೂಎಸ್‍ಎಸ್‍ಬಿ ಪ್ರತ್ಯೇಕವಾಗಿ ಸಂತ್ರಸ್ತರಿಗೆ ತಲಾ 50ಸಾವಿರ ರೂ. ಪರಿಹಾರ ಕೊಡಬೇಕೆಂದು ಆಗ್ರಹಿಸಿದರು.

ಸರ್ಕಾರ ತಕ್ಷಣವೇ 50ಸಾವಿರ ರೂ. ಪರಿಹಾರ ಕೊಡುವುದಾಗಿ ಘೋಷಣೆಯನ್ನೇನೋ ಮಾಡಿತ್ತು. ಆದರೆ, ಈವರೆಗೆ ಆ ಹಣ ಸಂತ್ರಸ್ತರ ಕೈ ತಲುಪಿಲ್ಲ. ಕೂಡಲೇ 50ಸಾವಿರ ರೂ. ಬದಲು ಒಂದು ಲಕ್ಷ ನೀಡಬೇಕೆಂದು ಒತ್ತಾಯಿಸಿದರು. ಕಳೆದ ಎರಡು ತಿಂಗಳಲ್ಲಿ ನಗರದ ಮೂರು ಕೆರೆಗಳು ಒಡೆದು ಅವಾಂತರ ಸೃಷ್ಟಿಯಾಗಿದೆ. ನಗರದಲ್ಲಿ 206 ಕೆರೆಗಳಿವೆ. ಅದರಲ್ಲಿ 178 ಪಾಲಿಕೆ ವ್ಯಾಪ್ತಿಯಲ್ಲಿವೆ. 60 ಕೆರೆಗಳನ್ನು 2016ರಲ್ಲೇ ಬಿಡಿಎ ಪಾಲಿಕೆಗೆ ಹಸ್ತಾಂತರ ಮಾಡಿದೆ ಎಂದು ಹೇಳಿದರು.

ಸದ್ಯ ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳನ್ನು ಬಿಡಿಎ ನಿರ್ವಹಣೆ ಮಾಡುತ್ತಿದೆ. 2016ರಲ್ಲಿ ಬಿಡಿಎ ಹಸ್ತಾಂತರ ಮಾಡಿದ ಕೆರೆಗಳಲ್ಲಿ ಹುಳಿಮಾವು ಕೆರೆ ಕೂಡ ಒಂದು. ಹಸ್ತಾಂತರ ಮಾಡಿದ ಯಾವುದೇ ಕೆರೆಗಳಿಗೆ ಅಧಿಕಾರಿಗಳು ಭೇಟಿ ನೀಡಲಿಲ್ಲ. ಆ ಕೆರೆಗಳ ವಿವರಗಳನ್ನೇ ನೀಡದೆ ಹಸ್ತಾಂತರ ಮಾಡಲಾಗಿದೆ. ಹಾಗಾಗಿ ಅವಘಡಗಳಿಗೆ ಬಿಡಿಎ ನೇರ ಹೊಣೆ ಎಂದು ತಿಳಿಸಿದರು.

ನೂರಾರು ಎಕರೆ ಇರುವ ಕೆರೆಗಳ ಅಭಿವೃದ್ಧಿ ಬಗ್ಗೆ ಸರ್ಕಾರ ಗಮನಹರಿಸುತ್ತಿಲ್ಲ. ಇದಕ್ಕೆ ಅಧಿಕಾರಿಗಳ ಸಂಖ್ಯೆ ಕಡಿಮೆ ಇರುವುದು ಕಾರಣ. ಅನರ್ಹ ಶಾಸಕರ ಕ್ಷೇತ್ರಕ್ಕೆ ಸರ್ಕಾರ ಸಾವಿರಾರು ಕೋಟಿ ನೀಡುತ್ತಿದೆ. ಆದರೆ, ಕೆರೆಗಳ ಅಭಿವೃದ್ಧಿ ಮಾತ್ರ ಶೂನ್ಯ ಎಂದು ದೂರಿದರು. ಹುಳಿಮಾವು ಕೆರೆ ಒಡೆದಿದ್ದರಿಂದ ಎಷ್ಟು ಮನೆಗಳಿಗೆ ಹಾನಿಯಾಗಿದೆ ಎಂಬುದು ಮೇಯರ್‍ಗೆ ಗೊತ್ತಿಲ್ಲ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಪ್ರತಿ ಮನೆಗೂ ಒಂದು ಲಕ್ಷ ಕೊಡಬೇಕು ಎಂದು ವಾಜಿದ್ ಆಗ್ರಹಿಸಿದರು.

ಆಯುಕ್ತರೇ ನೇರ ಹೊಣೆ: ಉಪ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿನ ಅಧಿಕಾರಿಗಳನ್ನು ಬದಲಾಯಿಸುವಂತೆ ಆಯುಕ್ತರಿಗೆ ಮನವಿ ಮಾಡಲಾಗಿತ್ತು. ಆದರೆ, ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆ ಕ್ಷೇತ್ರಗಳಲ್ಲಿ ಅವ್ಯವಹಾರ ನಡೆದರೆ ಅದಕ್ಕೆ ಬಿಬಿಎಂಪಿ ಆಯುಕ್ತರೇ ನೇರ ಹೊಣೆ ಎಂದು ಅವರು ಹೇಳಿದರು.

ಶಿವಾಜಿನಗರ, ಯಶವಂತಪುರ, ಮಹಾಲಕ್ಷ್ಮಿಲೇಔಟ್ ಹಾಗೂ ಕೆ.ಆರ್.ಪುರ ಕ್ಷೇತ್ರಗಳಲ್ಲಿ ಪಾರದರ್ಶಕ ಚುನಾವಣೆಗಾಗಿ 4-5 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಅಭಿಯಂತರರನ್ನು ತಾತ್ಕಾಲಿಕವಾಗಿ ಬೇರೆ ಕ್ಷೇತ್ರಗಳಿಗೆ ವರ್ಗಾವಣೆ ಮಾಡಬೇಕೆಂದು ಅವರು ಪುನರುಚ್ಚರಿಸಿದರು.

ಹುಳಿಮಾವು ಕೆರೆ ಕೋಡಿ ಒಡೆದಿದ್ದರಿಂದ ಸುಮಾರು 630 ಮನೆಗಳಿಗೆ ನೀರು ನುಗ್ಗಿ ಹಾನಿಯುಂಟಾಗಿದೆ. ಇದರಲ್ಲಿ 339 ಹೆಚ್ಚು ಹಾನಿಯಾದ ಮನೆಗಳೆಂದು ಗುರುತಿಸಿ ಅದರಲ್ಲಿ ಕೃಷ್ಣಾಲೇಔಟ್‍ನಲ್ಲಿರುವ 156 ಮನೆಗಳನ್ನು ಸಂಪೂರ್ಣವಾಗಿ ಹಾಳಾಗಿರುವ ಮನೆಗಳೆಂದು ಗುರುತಿಸಲಾಗಿದೆ.

ಈ ಮನೆಗಳಿಗೆ ಬಿಬಿಎಂಪಿಯಿಂದ 10ಸಾವಿರ ಹಾಗೂ ರಾಜ್ಯ ಸರ್ಕಾರದಿಂದ 40ಸಾವಿರ ಸೇರಿ ಒಟ್ಟು 50 ಸಾವಿರ ಪರಿಹಾರ ನೀಡಲು ಆಯುಕ್ತರಿಗೆ ಸಂಬಂಧಪಟ್ಟ ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ. ಆದರೆ, ಈವರೆಗೆ ಪರಿಹಾರ ದೊರೆಯದಿರುವುದು ವಿಷಾದನೀಯ ಎಂದು ಅಬ್ದುಲ್ ವಾಜೀದ್ ಹೇಳಿದರು.

Facebook Comments