ಬಿಬಿಎಂಪಿ ಮೇಯರ್ ಗೌತಮ್‍ಕುಮಾರ್ ಅವರ 100 ದಿನದ ಸಾಧನೆ ಶೂನ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.9- ಬಿಬಿಎಂಪಿ ಮೇಯರ್ ಗೌತಮ್‍ಕುಮಾರ್ ಅವರ 100 ದಿನದ ಸಾಧನೆ ಶೂನ್ಯ. ಇದುವರೆಗೂ ಅವರು ಮೂರು ಕೌನ್ಸಿಲ್ ಸಭೆ, ನಾಲ್ಕು ಸ್ಥಳ ಪರಿಶೀಲನೆ, ಐದು ಮೀಟಿಂಗ್ ಮಾಡಿರುವುದೇ ಇವರ ಸಾಧನೆ ಎಂದು ಪ್ರತಿಪಕ್ಷದ ನಾಯಕ ಅಬ್ದುಲ್ ವಾಜಿದ್ ಗಂಭೀರ ಆರೋಪ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮೇಯರ್ ಅಧಿಕಾರ ವಹಿಸಿಕೊಂಡಾಗ 100 ದಿನದಲ್ಲಿ ಹಲವಾರು ಸಮಸ್ಯೆಗಳಿಗೆ ಮುಕ್ತಿ ಹಾಡ್ತೀನಿ ಎಂದು ಘೋಷಿಸಿದ್ದರು. ಈಗ 100 ದಿನ ಕಳೆದಿದೆ. ಕಸದ ಸಮಸ್ಯೆ ತಾಂಡವವಾಡುತ್ತಿದೆ. ನಾಳೆಯಿಂದ ಕಸ ಹಾಕಲು ಜಾಗವಿಲ್ಲ. ಇವರ ಅವಧಿಯಲ್ಲಿ ನಗರ ಗಾರ್ಬೇಜ್ ಸಿಟಿಯಾಗಲಿದೆ ಎಂದು ಭವಿಷ್ಯ ನುಡಿದರು.

ಗೌತಮ್‍ಕುಮಾರ್ ಅವರ ಅವಧಿ ಕೇವಲ 10 ತಿಂಗಳು ಮಾತ್ರ. ಅದರಲ್ಲಿ 100 ದಿನ ಕಳೆದಿದೆ. ಇನ್ನು ಉಳಿದಿರುವುದು 100 ದಿನ. ಈಗಲಾದರೂ ಕಸದ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು. ಮೇಯರ್, ಉಪಮೇಯರ್, ಆಡಳಿತ ಪಕ್ಷದನಾಯಕರು ಮೂರು ದಿಕ್ಕಾಗಿದ್ದಾರೆ.

ಕೌನ್ಸಿಲ್ ಸಭೆಯಲ್ಲಿ ಮೇಯರ್ ಸುಪ್ರೀಂ ಆಗಿದ್ದರೂ ಕಮಿಷನರ್ ಆಡಳಿತ ನಡೆಸುತ್ತಿದ್ದಾರೆ. ಇವರಿಬ್ಬರ ನಡುವೆ ಹೊಂದಾಣಿಕೆ ಇಲ್ಲದೆ ಇರುವುದರಿಂದ ಜನ ತತ್ತರಿಸಿ ಹೋಗಿದ್ದಾರೆ ಎಂದರು. ಮೇಯರ್ ಬದಲು ಕಮಿಷನರ್ ಅವರೇ ಹಲವು ಸಭೆ ನಡೆಸುತ್ತಿದ್ದಾರೆ. ಈಹಿಂದೆ ತೆಗೆದುಕೊಂಡಿದ್ದ ಮಹತ್ವದ ತೀರ್ಮಾನವನ್ನು ರದ್ದುಗೊಳಿಸಿದ್ದಾರೆ.

ನಮ್ಮ ಅವಧಿಯಲ್ಲಿ ಜಾಹೀರಾತು ಮಾಫಿಯ ತಡೆದಿದ್ದೆವು. ಈಗ ಅನಿಲ್‍ಕುಮಾರ್ ಜಾಹೀರಾತು ಮಾಫಿಯಾ ಜತೆ ಕೈ ಜೋಡಿಸಿ ನ್ಯಾಯಾಲಯದ ಆದೇಶವಿದ್ದರೂ ಮತ್ತೆ ಜಾಹೀರಾತು ಪ್ರದರ್ಶಿಸುವುದಾಗಿ ಉಡಾಫೆ ಉತ್ತರ ಕೊಡುತ್ತಿದ್ದಾರೆ. ಹಾಗಾಗಿ ನಗರ ಹಲವು ಸಮಸ್ಯೆಗಳಿಂದ ನಲುಗಿ ಹೋಗಿದೆ ಎಂದು ಹೇಳಿದರು. ನಮ್ಮ ಅವಧಿಯಲ್ಲಿ ಕಸ ವಿಲೇವಾರಿಗಾಗಿ 47 ಪ್ಯಾಕೇಜ್ ಸಿದ್ದಪಡಿಸಿದ್ದೆವು. ಆ ಯೋಜನೆ ಜಾರಿಗೊಳಿಸಿದ್ದರೆ ಈಗ ಕಸದ ಸಮಸ್ಯೆ ಬಿಗಡಾಯಿಸುತ್ತಿರಲಿಲ್ಲ. ನಾಳೆಯಿಂದ ಕಸ ಸುರಿಯಲು ಜಾಗವೇ ಇಲ್ಲ. ಕಸದ ಸಮಸ್ಯೆ ನಿವಾರಿಸ್ತೀವಿ ಎಂದು ಹೇಳ್ತಾರೆ. ಹೇಗೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿ ಎಂದು ಅಬ್ದುಲ್ ವಾಜಿದ್ ಸವಾಲು ಹಾಕಿದರು.

ಅಧಿಕಾರ ವಹಿಸಿಕೊಂಡಾಗ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತೇವೆ. ವಾಹನ ದಟ್ಟಣೆ ನಿರಿಸ್ತೀವಿ, ನೀರಿನ ಸಮಸ್ಯೆ, ಕೆರೆಗಳ ಅಭಿವೃದ್ಧಿ, ಜನಸ್ನೇಹಿ ನಕ್ಷೆ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದೀರಿ. ಇದ್ಯಾವುದೂ ಜಾರಿಗೆ ಬಂದೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಫೆಬ್ರವರಿ, ಮಾರ್ಚ್‍ನಲ್ಲಿ ಬಜೆಟ್ ಮಂಡಿಸಬೇಕು. ಇದುವರೆಗೆ ಒಂದೇ ಒಂದು ಪೂರ್ವಭಾವಿ ಸಭೆ ನಡೆಸಿಲ್ಲ. ಬರಿ ಸುಳ್ಳು ಹೇಳಿ ಏಕೆ ಜನರನ್ನು ವಂಚಿಸುತ್ತಿದ್ದೀರಿ ಎಂದು ವಾಜಿದ್ ವಾಗ್ದಾಳಿ ನಡೆಸಿದರು.

Facebook Comments