ಕೊರೊನಾ ತಡೆಗಟ್ಟುವಲ್ಲಿ ಬಿಬಿಎಂಪಿ ವಿಫಲ : ವಿಪಕ್ಷ ನಾಯಕ ವಾಜೀದ್ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.30- ನಗರದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದರೂ ಬಿಬಿಎಂಪಿ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಪಾಲಿಕೆ ಸಭೆಯಲ್ಲಿಂದು ವಾಗ್ದಾಳಿ ನಡೆಸಿತು. ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್ ಮಾತನಾಡಿ, ನಗರದಲ್ಲಿ ಕೊರೊನಾ ಟೆಸ್ಟ್ ಸಮರ್ಪಕವಾಗಿ ಮಾಡುತ್ತಿಲ್ಲ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂದು ಆರೋಪಿಸಿದರು.

ಕೊರೊನಾ ಬಂದವರನ್ನು ಕರೆದೊಯ್ಯಲು ಆ್ಯಂಬುಲೆನ್ಸ್ ಬರುತ್ತಿಲ್ಲ. ಸೋಂಕು ಕಾಣಿಸಿಕೊಂಡವರು ಕರೆ ಮಾಡಿದರೂ ನಾಲ್ಕು ದಿನಗಳು ಕಳೆದರೂ ಅವರನ್ನು ಕರೆದೊಯ್ಯಲು ಯಾರೂ ಬರುತ್ತಿಲ್ಲ. ಆಡಳಿತ ಪಕ್ಷ ಏನು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದಿನನಿತ್ಯ ಕ್ವಾರಂಟೈನ್ ಮಾಡಲು ಹೊಸ ರೂಲ್ಸ್ ತರಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ, ಕೇಳಿದರೆ ನಾವು ಕೊರೊನಾ ವಾರಿಯರ್ಸ್ ಅಂತ ಮಾತಾಡ್ತೀರ, ನಿಮಗೆ ಜನರ ನೋವು ಕಾಣಿಸುತ್ತಿಲ್ಲವೆ ಎಂದು ವಾಗ್ದಾಳಿ ನಡೆಸಿದರು.

ಕೊರೊನಾ ಸಾಂಕ್ರಾಮಿಕ ರೋಗವಾಗಿದ್ದು, ಇದುವರೆಗೂ ಔಷಧಿ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಇಂತಹ ಮಹಾಮಾರಿಯನ್ನು ಹೊಡೆದೋಡಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಆಡಳಿತ ಪಕ್ಷದ ಸದಸ್ಯರು ಸಮರ್ಥಿಸಿಕೊಂಡರು. ಗಂಭೀರ ಚರ್ಚೆ: ಸಭೆ ಆರಂಭವಾಗುತ್ತಿದ್ದಂತೆ ನಗರದಲ್ಲಿರುವ ಪಾಲಿಕೆ ಆಸ್ತಿಗಳನ್ನು ರಕ್ಷಿಸಿಕೊಳ್ಳುವ ಅಗತ್ಯವಿದೆ ಎಂದು ಪಕ್ಷಾತೀತವಾಗಿ ಎಲ್ಲ ಸದಸ್ಯರೂ ಆಗ್ರಹಿಸಿದರು.

ನಗರದ ಹಲವೆಡೆ ಪಾಲಿಕೆ ಆಸ್ತಿಗಳಿವೆ. ಕೆಲವರು ನಮ್ಮ ಆಸ್ತಿಯನ್ನು ಕಬಳಿಕೆ ಮಾಡಿದ್ದಾರೆ. ಈಗಾಗಲೇ ಆಸ್ತಿ ಕಬಳಿಕೆ ಪತ್ತೆಹಚ್ಚಲು ಕಮಿಟಿ ರಚನೆ ಮಾಡಲಾಗಿದೆ. ಸಮಿತಿ ಭೇಟಿ ಸಂದರ್ಭದಲ್ಲಿ ಸಾವಿರಾರು ಕೋಟಿ ಮೌಲ್ಯದ ಆಸ್ತಿ ಕಬಳಿಕೆಯಾಗಿರುವುದು ಪತ್ತೆಯಾಗಿದೆ. ಹೀಗಾಗಿ ಪಾಲಿಕೆ ಆಸ್ತಿಯಲ್ಲಿರುವ ಕಟ್ಟಡಗಳನ್ನು ನೆಲಸಮ ಮಾಡಿ ಇಡೀ ಪ್ರದೇಶವನ್ನು ಬಿಬಿಎಂಪಿ ವ್ಯಾಪ್ತಿಗೆ ಪಡೆದುಕೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.

Facebook Comments