ಬಿಬಿಎಂಪಿ ಚುನಾವಣೆ ಮುಂದೂಡಿದರೆ ಕೋರ್ಟ್ ಮೊರೆ : ಅಬ್ದುಲ್ ವಾಜೀದ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.4- ಇಲ್ಲ ಸಲ್ಲದ ನೆಪವೊಡ್ಡಿ ಪಾಲಿಕೆ ಚುನಾವಣೆ ಮುಂದೂಡಿಕೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಪಾಲಿಕೆ ಪ್ರತಿಪಕ್ಷದ ನಾಯಕ ಅಬ್ದುಲ್ ವಾಜೀದ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಚನೆಯ ನೆಪವೊಡ್ಡಿ 2006ರಿಂದ 2009ರವರೆಗೂ ಚುನಾವಣೆ ಮುಂದೂಡಿದರು. ಈ ವೇಳೆ ಸುಪ್ರೀಂಕೋರ್ಟ್ ಆದೇಶದ ನಂತರ ಚುನಾವಣೆ ಮಾಡಿದರು.

198 ವಾರ್ಡ್‍ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ರಸ್ತೆ ಸಮರ್ಪಕವಾಗಿಲ್ಲ. ಅನೇಕ ವಾರ್ಡ್‍ಗಳು ಮೂಲಭೂತ ಸೌಕರ್ಯವಿಲ್ಲದೆ ನಲುಗುತ್ತಿದೆ. ಹೀಗಿರುವಾಗ ಮತ್ತೆ ಬಿಬಿಎಂಪಿ ವ್ಯಾಪ್ತಿಗೆ 60 ಹಳ್ಳಿಗಳ ಸೇರ್ಪಡೆ ಮಾಡುತ್ತೇವೆ ಎಂಬ ನೆಪವೊಡ್ಡಿ ಮತ್ತೆ ಬಿಬಿಎಂಪಿ ಚುನಾವಣೆ ಮುಂದೂಡಲು ಸರ್ಕಾರ ಯತ್ನಿಸುತ್ತಿದ್ದು; ಇದಕ್ಕೆ ಅವಕಾಶ ನೀಡುವುದಿಲ್ಲ. ಹಾಗೇನಾದರೂ ಪ್ರಯತ್ನಿಸಿದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದರು.

ಹಾಲಿ ಮೇಯರ್ ಗೌತಮ್ ಕುಮಾರ್ ಅವರ ಅಧಿಕಾರವಧಿ ಇದೇ 10ಕ್ಕೆ ಪೂರ್ಣಗೊಳ್ಳಲಿದೆ. ಈ ವೇಳೆಗಾಗಲೇ ಚುನಾವಣೆ ನಡೆಯಬೇಕಿತ್ತು. ಕೊರೋನಾದಿಂದ ವಿಳಂಬವಾಗಿದೆ. ಕೊರೋನಾ ಈಗ ನಿಯಂತ್ರಣಕ್ಕೆ ಬಂದಿದ್ದು ಡಿಸೆಂಬರ್, ಜನವರಿ ನಂತರವಾದರೂ ಚುನಾವಣೆ ನಡೆಯುತ್ತದೆ ಎಂದುಕೊಂಡಿದ್ದೆವು. ಆದರೆ ಈ ಸರ್ಕಾರ ಪಾಲಿಕೆಗೆ ಪ್ರತ್ಯೇಕ ಕಾಯ್ದೆ ರಚನೆಗೆ ಶಾಸಕ ರಘು ನೇತೃತ್ವದಲ್ಲಿ ಸಮಿತಿ ರಚಿಸಿದೆ.

ನಿನ್ನೆ ಸಚಿವ ಸಂಪುಟ ಸಭೆಯಲ್ಲೂ ಸಹ ಪಾಲಿಕೆ ವಾರ್ಡ್‍ಗಳನ್ನು 225ಕ್ಕೆ ಏರಿಸುತ್ತೇವೆ. 15 ಝೋನ್‍ಗಳನ್ನು ಮಾಡಲಾಗುತ್ತದೆ ಎಂದು ತಿಳಿಸಿದೆ. ಅಲ್ಲಿಯವರೆಗೂ ಚುನಾವಣೆ ನಡೆಯಬಾರದೆಂಬ ಉದ್ದೇಶವಿದೆ. ಮೀಸಲಾತಿ ಪ್ರಕಟ ಮಾಡಿ ಪ್ರತಿಪಕ್ಷದವರಾರು ಚುನಾವಣೆಗೆ ಸ್ಪರ್ಧಿಸಬಾರದೆಂದು ಹುನ್ನಾರ ನಡೆಸುತ್ತಿದೆ. ಸರ್ಕಾರದ ಧೋರಣೆ ಅಡ್ಡಗೋಡೆ ಮೇಲೆ ದೀಪವಿಟ್ಟಂತಿದೆ ಎಂದರು.

ಸರ್ಕಾರಕ್ಕೆ ಚುನಾವಣೆ ನಡೆಸಲು ಯಾವುದೇ ಒಲವಿಲ್ಲ. ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಾದರೆ ಸ್ಥಳೀಯ ಜನಪ್ರತಿನಿಧಿಗಳಿರಬೇಕು. ಆದರೆ ಚುನಾವಣೆ ನಡೆಸದೇ ಈ ರೀತಿ ವಿಳಂಬ ಮಾಡಿದರೆ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತವೆ. ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯುಂಟು ಮಾಡದೆ ಸಕಾಲದಲ್ಲಿ ಚುನಾವಣೆ ನಡೆಸುವ ಮೂಲಕ ಪ್ರಜಾತಂತ್ರ ವ್ಯವಸ್ಥೆ ಉಳಿಸಬೇಕಿದೆ ಎಂದರು.

 

Facebook Comments