ಬೆಂಗಳೂರಿನ ನಿಜವಾದ ಮೇಯರ್ ಯಾರು..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.18- ಅನರ್ಹ ಶಾಸಕರ ಜತೆ ಗುರುತಿಸಿಕೊಂಡಿರುವ ಬಿಬಿಎಂಪಿ ಸದಸ್ಯರನ್ನು ಪಕ್ಷದಿಂದ ಹಾಗೂ ಸದಸ್ಯತ್ವದಿಂದ ಉಚ್ಚಾಟಿಸಲು ಶಿಫಾರಸು ಮಾಡುವುದಾಗಿ ಬಿಬಿಎಂಪಿ ಪ್ರತಿಪಕ್ಷದ ನಾಯಕ ಅಬ್ದುಲ್ ವಾಜೀದ್ ಇಂದಿಲ್ಲಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕರ ಜತೆ ಬಹಿರಂಗವಾಗಿ ಗುರುತಿಸಿಕೊಂಡಿರುವ ಕಾಂಗ್ರೆಸ್‍ನ ಬಿಬಿಎಂಪಿ ಸದಸ್ಯರಾದ ಎಂ.ಎನ್.ಶ್ರೀಕಾಂತ್, ವಿ.ಸುರೇಶ್, ಎನ್.ಮಂಜುನಾಥ್, ಬಿ.ಎನ್.ಜಯಪ್ರಕಾಶ್, ಆರ್ಯ ಶ್ರೀನಿವಾಸ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರಿಗೆ ಪತ್ರ ಬರೆಯಲಾಗುವುದು. ಉಚ್ಚಾಟನೆ ನಂತರ ಬಿಬಿಎಂಪಿ ಸದಸ್ಯತ್ವದಿಂದ ಅನರ್ಹಗೊಳಿಸಬೇಕೆಂದು ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆಯುವುದಾಗಿ ಹೇಳಿದರು.

ಮೇಯರ್ ಗೌತಮ್‍ಕುಮಾರ್ ಜೈನಾ… ಮೋಹನ್‍ರಾಜಾ…? :
ಪ್ರಸ್ತುತ ಬಿಬಿಎಂಪಿಯಲ್ಲಿ ಮೇಯರ್ ಆಗಿರುವುದು ಗೌತಮ್‍ಕುಮಾರ್ ಜೈನಾ ಅಥವಾ ಮೋಹನ್‍ರಾಜಾ ಎಂಬುದು ಗೊತ್ತಾಗುತ್ತಿಲ್ಲ. ಮೇಯರ್ ಕರ್ತವ್ಯವನ್ನು ಉಪ ಮೇಯರ್ ಅವರೇ ನಿರ್ವಹಿಸುತಿರುವಂತಿದೆ ಎಂದು ಅಬ್ದುಲ್ ವಾಜೀದ್ ಆರೋಪಿಸಿದರು.

ಬಿಬಿಎಂಪಿ ವ್ಯಾಪ್ತಿಯ ಇಂದಿರಾಕ್ಯಾಂಟಿನ್‍ಗಳ ಹೆಸರನ್ನು ಬದಲಾಯಿಸುವುದಿಲ್ಲ ಎಂದು ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಸ್ಪಷ್ಟನೆ ನೀಡಿದ್ದಾರೆ. ಆದರೆ, ಉಪ ಮೇಯರ್ ಆದ ಮೋಹನ್‍ರಾಜ್ ಅವರು ಇಂದಿರಾಕ್ಯಾಂಟಿನ್‍ಗೆ ಕೆಂಪೇಗೌಡರ ಹೆಸರಿಡುವುದಾಗಿ ಹೇಳುತ್ತಿದ್ದಾರೆ. ಅಲ್ಲದೆ ಬಿ ಖಾತೆಗಳ ಆಸ್ತಿಗಳನ್ನು ಎ ಖಾತೆಗೆ ಬದಲಾಯಿಸುವ ಭರವಸೆ ನೀಡುತ್ತಿದ್ದಾರೆ. ಮೇಯರ್ ಯಾರೆಂಬುದು ಗೊತ್ತಾಗುತ್ತಿಲ್ಲ . ಗೌತಮ್‍ಕುಮಾರ್ ಅವರು ಮೋಹನ್‍ರಾಜ್ ಅವರೇ ಮೇಯರ್ ಎಂದು ತಿಳಿಸಲಿ ಎಂದರು.

ವೈಟ್ ಟಾಪಿಂಗ್ ಕಾಮಗಾರಿಯಲ್ಲಿ ಅವ್ಯವಹಾರವಾಗಿದೆ ಎಂದು ಅನಗತ್ಯ ಆರೋಪ ಮಾಡಿರುವ ಎನ್.ಆರ್.ರಮೇಶ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದ ಅವರು, ಬಿಜೆಪಿಯಲ್ಲಿ ಸುರೇಶ್‍ಕುಮಾರ್, ಸೋಮಣ್ಣ,ಅಶೋಕ್‍ರಂತಹ ಹಿರಿಯರಿದ್ದರೂ ಯಾರೋ ಒಬ್ಬ ವ್ಯಕ್ತಿ ಆರೋಪ ಮಾಡಿದ್ದಾರೆ ಎಂದು ವೈಟ್ ಟಾಪಿಂಗ್ ಕಾಮಗಾರಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ತನಿಖೆಗೆ ಆದೇಶಿಸಿದರು ಎಂದು ತಿಳಿಸಿದರು.

ದೊಡ್ಡಿಹಾಳ್ ನೇತೃತ್ವದ ಸಮಿತಿ ತನಿಖೆ ನಡೆಸಿ ಸದರಿ ಕಾಮಗಾರಿಯಲ್ಲಿ ಯಾವುದೇ ಅವ್ಯವಹಾರವಾಗಿಲ್ಲ ಎಂದು ವರದಿ ನೀಡಿದೆ. ಅನಗತ್ಯ ಆರೋಪ ಮಾಡಿದ ಎನ್.ಆರ್.ರಮೇಶ್ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಬೆಂಗಳೂರು ನಾಗರಿಕರನ್ನು ರಮೇಶ್ ಅವರು ಕ್ಷಮೆ ಕೇಳಬೇಕೆಂದು ಅವರು ಒತ್ತಾಯಿಸಿದರು. ಬಿಜೆಪಿಯವರು ನಮ್ಮ ಸರ್ಕಾರವನ್ನು ಈ ಹಿಂದೆ 10ಪರ್ಸೆಂಟ್ ಸರ್ಕಾರ ಎಂದು ಆರೋಪ ಮಾಡಿದ್ದರು. ಈ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ತಿಳಿಸಿದರು.

ಲೂಟಿ ಸರ್ಕಾರ:
ಬಿಜೆಪಿ ಸರ್ಕಾರವೇ ಲೂಟಿ ಸರ್ಕಾರವಾಗಿದೆ ಎಂದು ಗಂಭೀರ ಆರೋಪ ಮಾಡಿದ ಅಬ್ದುಲ್ ವಾಜೀದ್, ವೈಟ್ ಟಾಪಿಂಗ್ ಕಾಮಗಾರಿಯಲ್ಲಿ ಅವ್ಯವಹಾರವಾಗಿದೆ ಎಂದು ಆರೋಪಿಸುವ ನೀವು ಸ್ಮಾರ್ಟ್ ಸಿಟಿ ಯೋಜನೆಯಡಿ 36 ರಸ್ತೆಗಳನ್ನು ಬ್ಲಾಕ್ ಟಾಪಿಂಗ್ ಯೋಜನೆಯಡಿ ಅಭಿವೃದ್ಧಿಪಡಿಸಲು ಮುಂದಾಗಿ ಕಿ.ಮೀ. ಒಂದಕ್ಕೆ 14ರಿಂದ 15 ಕೋಟಿಗಳನ್ನು ನಿಗದಿ ಪಡಿಸಲಾಗಿದೆ ಎಂದರು.

ಬ್ಲಾಕ್ ಟಾಪಿಂಗ್ ಕಾಮಗಾರಿ ರಸ್ತೆಗಳು ಕೇವಲ ಒಂದು ವರ್ಷ ಬಾಳಿಕೆ ಬರುತ್ತವೆ. ಕಿ.ಮೀ.ಗೆ 15 ಕೋಟಿ ವೆಚ್ಚವಾಗುತ್ತದೆ. ಆದರೆ, ವೈಟ್ ಟಾಪಿಂಗ್ ಕಾಮಗಾರಿ ಒಂದು ಕಿ.ಮೀ.ಗೆ ಕೇವಲ 10 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುವ ರಸ್ತೆಗಳು ಸುಮಾರು 10 ವರ್ಷ ಬಾಳಿಕೆ ಬರುತ್ತವೆ. ಯಾವುದು ಲೂಟಿ ಸರ್ಕಾರ ಎಂದು ಪ್ರಶ್ನಿಸಿದರು.

ಇದಲ್ಲದೆ, ಬಸ್‍ಲೈನ್ ಕಾರಿಡಾರ್ ಕಾಮಗಾರಿ ಅನಾಮಧೇಯರಿಗೆ ಟೆಂಡರ್ ನೀಡಲಾಗಿದೆ. ಒಂದು ಕಿ.ಮೀ.ಗೆ ಒಂದು ಕೋಟಿ ವೆಚ್ಚ ನಿಗದಿ ಮಾಡಲಾಗಿದೆ. ಇದರಲ್ಲೂ ಲೂಟಿ ಮಾಡಲಾಗಿದೆ ಎಂದು ವಾಜೀದ್ ಗಂಭೀರ ಆರೋಪ ಮಾಡಿದರು.

Facebook Comments