ಭಾರತೀಯ ಸೇನಾ ಬತ್ತಳಿಕೆಗೆ ಮಹಾ ಅಸ್ತ್ರ ಸೇರ್ಪಡೆ, ಅಭ್ಯಾಸ್ ಡ್ರೋಣ್ ಪರೀಕ್ಷೆ ಯಶಸ್ವಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.23-ದೇಶದ ಗಡಿ ಭಾಗಗಳಲ್ಲಿ ಒಂದೆಡೆ ಚೀನಾ, ಇನ್ನೊಂದೆಡೆ ಪಾಕಿಸ್ತಾನ ಸೇನಾಪಡೆಗಳ ಉಪಟಳ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಭಾರತೀಯ ಸಶಸ್ತ್ರ ಪಡೆಗಳಿಗೆ ಹೊಸ ಹೊಸ ಯುದ್ಧಾಸ್ತ್ರಗಳು ಸೇರ್ಪಡೆಯಾಗುತ್ತಿವೆ.

ಈಗ ಮತ್ತೊಂದು ಮಹಾ ಅಸ್ತ್ರವೂ ಸೇನಾ ಬತ್ತಳಿಕೆಗೆ ಶೀಘ್ರ ಸೇರಲಿದೆ. ವೈರಿಗಳ ನೆಲೆಯನ್ನು ನಿಖರವಾಗಿ ಗುರುತಿಸಿ ಕ್ಷಣಾರ್ಧದಲ್ಲೇ ಧ್ವಂಸ ಮಾಡುವ ಅತ್ಯಾಧುನಿಕ ಡ್ರೋಣ್‍ನನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ (ಡಿಆರ್‍ಡಿಒ) ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದೆ.

ಅಭ್ಯಾಸ್ ಹೆಸರಿನ ಹೈ-ಸ್ಪೀಡ್ ಎಕ್ಸ್‍ಪಾಂಡೆಬಲ್ ಏರಿಯಲ್ ಟಾರ್ಗೆಟ್ (ಹೀಟ್) ಡ್ರೋನ್‍ನನ್ನು ಯಶಸ್ವಿಯಾಗಿ ಹಾರಾಟ ಪರೀಕ್ಷೆಗೆ ಒಳಪಡಿಸಲಾಗಿದೆ. ಹಸರೇ ಹೇಳುವಂತೆ ಇದು ಅತ್ಯಂತ ವೇಗದ ವಿಸ್ತರಣಾ ವೈಮಾನಿಕ ಗುರಿ ಮುಟ್ಟುವ ಹಾರುವ ಯಂತ್ರವಾಗಿದೆ.

ಒಡಿಶಾದ ಬಾಲಾಸೋರ್‍ನ ಮಧ್ಯಂತರ ಪರೀಕ್ಷಾ ವಲಯದಲ್ಲಿ ಅಭ್ಯಾಸ್ ಡ್ರೋಣ್‍ನ ಹಾರಾಟ ಮತ್ತು ನಿಖರ ಗುರಿ ಮುಟ್ಟುವ ಪ್ರಯೋಗ ಅತ್ಯಂತ ಯಶಸ್ವಿಯಾಗಿದೆ ಎಂದು ಡಿಆರ್‍ಡಿಒ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಭ್ಯಾಸ್ ಪರೀಕ್ಷಾರ್ಥ ಹಾರಾಟ ಪ್ರಯೋಗ ಯಶಸ್ವಿಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಡಿಆರ್‍ಡಿಒ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ರಕ್ಷಣಾ ಕ್ಷೇತ್ರದಲ್ಲಿ ಇದೊಂದು ಮಹತ್ವದ ಮೈಲಿಗಲ್ಲು. ವಿವಿಧ ಕ್ಷಿಪಣಿಗಳು ಮತ್ತು ಅವುಗಳ ಕಾರ್ಯಾಚರಣೆಯ ಮೌಲ್ಯಮಾಪನ ಹಾಗೂ ದಾಳಿಗಳಿಗೆ ಅಭ್ಯಾಸ ನೆರವಾಗಲಿದೆ ಎಂದು ಹೇಳಿದ್ದಾರೆ.

Facebook Comments