ಬೆಚ್ಚಿಬೀಳಿಸುವ ಸುದ್ದಿ : ಐಸಿಸ್ ನರರಾಕ್ಷಸ ಅಬು ಬಕರ್ ಅಲ್-ಬಾಗ್ದಾದಿ ಸತ್ತಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

ಮೊಸುಲ್, ಏ.30-ಅಮೆರಿಕದ ಡ್ರೋಣ್ ದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಎಸ್‍ಐಎಸ್ ಅಥವಾ ಐಸಿಸ್) ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಅಬು ಬಕರ್ ಅಲ್-ಬಾಗ್ದಾದಿ ಹತನಾಗಿದ್ದಾನೆ ಎಂಬ ನಂಬಿದ್ದವರಿಗೆ ಆಘಾತಕಾರಿ ಸುದ್ದಿಯೊಂದು ಮತ್ತಷ್ಟು ಆತಂಕ ಸೃಷ್ಟಿಸಿದೆ.

ಐದು ವರ್ಷಗಳ ಬಳಿಕ ವಿಡಿಯೋವೊಂದರಲ್ಲಿ ಮತ್ತೆ ಪ್ರತ್ಯೇಕನಾದ ಬಾಗ್ದಾದಿ ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ನಡೆದ ಈಸ್ಟರ್ ಸಂಡೆಯ ಭಯಾನಕ ದಾಳಿಗೆ ಐಸಿಸ್ ಕಾರಣ ಎಂದು ಘೋಷಿಸಿದ್ದಾನೆ. ಮತ್ತೆ ಏಷ್ಯಾ ಖಂಡದ ವಿವಿಧೆಡೆ ದಾಳಿ ನಡೆಸುವುದಾಗಿಯೂ ಆತನ ಗಂಭೀರ ಎಚ್ಚರಿಕೆ ನೀಡಿದ್ದಾರೆ.

ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆ ತನ್ನ ಪ್ರಾಬಲ್ಯ ಕಳೆದುಕೊಂಡ ಬಗ್ಗೆ ವಿಚಲಿತನಾದಂತೆ ಕಂಡಬಂದ ಬಾಗ್ದಾದಿ ನಮ್ಮ ಹೋರಾಟ ನಿಂತಿಲ್ಲ. ಅದು ಸತತವಾಗಿ ಮುಂದುವರಿಯಲಿದೆ ಎಂದು ಹೇಳಿಕೊಂಡಿದ್ದಾನೆ.

ಶ್ರೀಲಂಕಾದ ಐದು ಚರ್ಚ್‍ಗಳು ಮತ್ತು ಮೂರು ಪಂಚತಾರಾ ಹೊಟೇಲ್‍ಗಳ ಮೇಲೆ ನಮ್ಮ ಹೋರಾಟಗಾರರು ದಾಳಿ ನಡೆಸಿರುವುದನ್ನು ಸಮರ್ಥಿಸಿಕೊಂಡಿರುವ ಕುಖ್ಯಾತ ಭಯೋತ್ಪಾದಕ ಈ ವಿಧ್ವಂಸಕ ಕೃತ್ಯ ಎಸಗಿದ ಆತ್ಮಾಹುತಿ ದಾಳಿಕೋರರನ್ನು ಅಭಿನಂದಿಸಿದ್ದಾನೆ.

ಖಾಲಿ ಬಿಳಿ ಕೊಠಡಿಯೊಂದರಲ್ಲಿ ಹೂವಿನ ಚಿತ್ತಾರವಿರುವ ಹಾಸಿಗೆಯ ಮೇಲೆ ಕುಳಿತ ಕಪ್ಪು ವಸ್ತ್ರಧಾರಿ ಬಾಗ್ದಾದಿ ಸಿರಿಯಾದ ಬಾಘೆಜ್‍ನಲ್ಲಿ ಇತ್ತೀಚೆಗೆ ಐಸಿಸ್ ಪರಾಭವಗೊಂಡಿರುವ ಬಗ್ಗೆ ಮಾತನಾಡಿದ್ದಾನೆ. ನಮ್ಮ ಧರ್ಮಯುದ್ಧ ಇಷ್ಟಕ್ಕೇ ಕೊನೆಗೊಂಡಿಲ್ಲ. ಅದು ನಿರಂತವಾಗಿ ಮುಂದುವರಿಯುತ್ತದೆ ಎಂದು ನರರೂಪದ ರಾಕ್ಷಸ ಗುಡುಗಿದ್ದಾನೆ.

ಬಾಗ್ದಾದಿ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, 2014ರಲ್ಲಿ ಉತ್ತರ ಇರಾಕ್‍ನ ಮೊಸುಲ್‍ನ ಅಲ್ ನೂರಿ ಮಸೀದಿಯಲ್ಲಿ ಕುಳಿತು ಮಾತನಾಡಿ, ತನ್ನ ವೈರಿಗಳ ವಿರುದ್ಧ ದೊಡ್ಡ ಸಮರ ಸಾರುವುದಾಗಿ ಘೋಷಿಸಿದ್ದ. ಕಪ್ಪು ಮಿಶ್ರಿತ ಗಡ್ಡ, ಎಂದಿನಂತೆ ತನ್ನ ಕೈಯಲ್ಲಿ ರೈಫಲ್ ಹಿಡಿದಿರುವ ಹೊಸ ವಿಡಿಯೋದಲ್ಲಿ ಬಾಗ್ದಾದಿ ಉತ್ತಮ ಆರೋಗ್ಯ ಹೊಂದಿರುವವನಂತೆ ಗೋಚರಿಸುತ್ತಿದ್ದಾನೆ.

ಬಾಗ್ದಾದಿ ತನ್ನ ವೈಮಾನಿಕ ದಾಳಿ ಮತ್ತು ಡ್ರೋಣ್ ಆಕ್ರಮಣದಲ್ಲಿ ಮೃತಪಟ್ಟಿದ್ದಾನೆ ಎಂದು ಅಮೆರಿಕದ ಸೇನಾ ಪಡೆ ಮತ್ತು ರಕ್ಷಣಾ ಇಲಾಖೆ ಪೆಂಟಗನ್ ಹಲವು ಬಾರಿ ಹೇಳಿಕೊಂಡಿತ್ತು. ಈ ಹೇಳಿಕೆಗಳನ್ನು ಹುಸಿಗೊಳಿಸುವಂತೆ ಬಾಗ್ದಾದಿ ಮತ್ತೆ ಪ್ರತ್ಯಕ್ಷನಾಗಿ ವಿಧ್ವಂಸಕ ಕೃತ್ಯದ ಬಗ್ಗೆ ಎಚ್ಚರಿಕೆ ನೀಡಿರುವುದು ಆಘಾತಕಾರಿ ಸುದ್ದಿಯಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin