ABVP ಹೋರಾಟಕ್ಕೆ ಮಾಜಿ ಸೈನಿಕರ ಬೆಂಬಲ

ಈ ಸುದ್ದಿಯನ್ನು ಶೇರ್ ಮಾಡಿ

ABVP-00002

ಬೆಂಗಳೂರು, ಆ.21-ನಗರದಲ್ಲಿ ಕಳೆದ ವಾರ ಆಮ್ನೆಸ್ಟಿ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇಶ ಹಾಗೂ ಸೈನಿಕ ವಿರೋಧಿ ಘೋಷಣೆ ಕೂಗಿದ ದೇಶದ್ರೋಹಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ಎಬಿವಿಪಿ ಅಹೋರಾತ್ರಿ ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದ್ದು, ಇಂದು ನಿವೃತ್ತ ಸೈನಿಕರು ಪ್ರತಿಭಟನೆಗೆ ಸಾಥ್ ನೀಡಿದರು.  ಬೆಂಗಳೂರಿನ ಆನಂದ್ರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ ನಡೆಯುತ್ತಿರುವ ಎಬಿವಿಪಿ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡ 40ಕ್ಕೂ ಹೆಚ್ಚು ನಿವೃತ್ತ ಸೈನಿಕರು, ರಾಷ್ಟ್ರ ವಿರೋಧಿ ಘೋಷಣೆ ಕೂಗಿದವರನ್ನು ಹಾಗೂ ಸೈನಿಕರನ್ನು ಅವಮಾನ ಮಾಡಿದವರನ್ನು ಕೂಡಲೇ ಬಂಧಿಸಬೇಕು.  ದೇಶ ವಿರೋಧಿ ಕಾರ್ಯಕ್ರಮವನ್ನು ಆಯೋಜಿಸಿದ್ದ ಆಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆಯ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ನಿವೃತ್ತ ಕರ್ನಲ್ ಎಸ್.ಎನ್.ರಾಜ್ ನೇತೃತ್ವದಲ್ಲಿ ಭಾಗವಹಿಸಿದ್ದ ನಿವೃತ್ತ ಸೈನಿಕರು ಆಮ್ನೆಸ್ಟಿ ಸಂಘಟನೆ ಮೃದು ಧೋರಣೆ ತಳೆದಿರುವ ರಾಜ್ಯಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು, ಅಲ್ಲದೆ ಪಾಕಿಸ್ತಾನದ ಪರವಾಗಿ ಹೇಳಿಕೆ ನೀಡಿರುವ ಮಾಜಿ ಸಂಸದೆ ರಮ್ಯಾ ವರ್ತನೆಯನ್ನು ಖಂಡಿಸಿದರು.ರಮ್ಯಾ ಅವರು ಈ ಹೇಳಿಕೆಯನ್ನು ವಾಪಸ್ ಪಡೆಯಬೇಕೆಂದು ಅವರು ಆಗ್ರಹಿಸಿದರು.   ಚಿತ್ರನಟ ಜಗ್ಗೇಶ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಹುರಿದುಂಬಿಸಿದರು. ಸರ್ಕಾರ ದೇಶದ್ರೋಹಿಗಳನ್ನು ಬಂಧಿಸಿ ಎಂದು ಆಗ್ರಹಿಸಿದರೆ ಎಬಿವಿಪಿ ಕಾರ್ಯಕರ್ತರನ್ನು ಬಂಧಿಸಿ ಕ್ರಮಕೈಗೊಳ್ಳುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಹೇಳಿದರು.

ಇದಕ್ಕೂ ಮುನ್ನ ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ್ ಬಿದರಿ ಈ ಸಂಜೆ ಪತ್ರಿಕೆಯೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಹೋರಾಟವನ್ನು ಕೈಬಿಡುವುದಿಲ್ಲ. 48 ಗಂಟೆಗಳ ಅಹೋರಾತ್ರಿ ಧರಣಿ ಮುಗಿದ ಮೇಲೆ ಹೋರಾಟದ ಸ್ವರೂಪವನ್ನು ಬದಲಿಸುತ್ತೇವೆ. ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದರು.  ಪ್ರಕರಣ ತನಿಖೆ ಹಂತದಲ್ಲಿರುವಾಗಲೇ ಗೃಹ ಸಚಿವರು ಕ್ಲೀನ್ ಚಿಟ್ ನೀಡಿರುವುದು ದೌರ್ಭಾಗ್ಯದ ಸಂಗತಿ. ಗೃಹ ಸಚಿವರು ಅವರನ್ನು ರಕ್ಷಣೆ ಮಾಡುವ ಈ ಹೇಳಿಕೆ ಖಂಡನೀಯ. ಇಡೀ ಸರ್ಕಾರ ಅವರ ಪರವಾಗಿ ಕೆಲಸ ಮಾಡುತ್ತಿದೆ. ಇದರ ವಿರುದ್ಧ ಎಬಿವಿಪಿ ಹೋರಾಟವನ್ನು ಮುಂದುವರೆಸಲಿದೆ ಎಂದು ಹೇಳಿದರು.

ಪಾಕಿಸ್ತಾನ ಪರವಾಗಿ ಮಾಜಿ ಸಂಸದೆ ರಮ್ಯಾ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ರಾಹುಲ್ಗಾಂಧಿ, ದಿಗ್ವಿಜಯ್ಸಿಂಗ್, ಸಿದ್ದರಾಮಯ್ಯ, ಗೃಹ ಸಚಿವರನ್ನು ಮೆಚ್ಚಿಸಲು ಅವರು ಇಂತಹ ಹೇಳಿಕೆ ನೀಡಿದ್ದಾರೆ. ಅವರ ದೇಶಪ್ರೇಮ ಎಷ್ಟು ಎಂಬುದನ್ನು ತೋರಿಸುತ್ತದೆ. ಈಗಾಗಲೇ ಅವರ ವಿರುದ್ಧ ಹೋರಾಟ ನಡೆಯುತ್ತಿದೆ. ನಾವು ಆಮ್ನೆಸ್ಟಿ ಮಾತ್ರ ಹೋರಾಟ ಮಾಡುತ್ತೇವೆ. ರಾಜ್ಯಸರ್ಕಾರದ ಕುಟಿಲ ನೀತಿಯನ್ನು ಕಟ್ಟಕಡೆಯ ವಿದ್ಯಾರ್ಥಿಯವರೆಗೂ ತಲುಪಿಸುತ್ತೇವೆ ಎಂದು ತಿಳಿಸಿದರು.

► Follow us on –  Facebook / Twitter  / Google+
c

Facebook Comments

Sri Raghav

Admin