ಮೂವರು ಅಧಿಕಾರಿಗಳಿಗೆ ಎಸಿಬಿ ಶಾಕ್ : ಮಹತ್ವದ ದಾಖಲೆಗಳು ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.27-ಟಿಡಿಆರ್ ಹಗರಣದ ತನಿಖೆಯನ್ನು ಚುರುಕುಗೊಳಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಇಂದು ಬಿಬಿಎಂಪಿಯ ಮೂರು ಮಂದಿ ಅಧಿಕಾರಿಗಳ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಮಹತ್ವದ ದಾಖಲೆ ಗಳನ್ನು ವಶಪಡಿಸಿ ಕೊಂಡಿದೆ. ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳಾದ ದೇವರಾಜು ಅವರ ಎಚ್‍ಎಸ್‍ಆರ್ ಲೇಔಟ್ ನಿವಾಸ, ರಾಮೇಗೌಡರ ವಿಜಯನಗರದ ನಿವಾಸ, ಜಯಪ್ರಕಾಶ್ ಅವರ ಸೋಂಪುರ ಗೇಟ್ ನಿವಾಸಗಳ ಮೇಲೆ ಮತ್ತು ಬಿಬಿಎಂಪಿಯ ಅವರ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

ಟಿಡಿಆರ್ ಹಗರಣ ಬಗೆದಷ್ಟು ತನ್ನ ವಿಶ್ವರೂಪವನ್ನು ತೋರಿಸುತ್ತಿದ್ದು, ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳ ಮುಖವಾಡ ಬಯಲು ಮಾಡುತ್ತಿದೆ.  ಇತ್ತೀಚೆಗಷ್ಟೇ ಎಸಿಬಿಯಿಂದ ಬಂಧನಕ್ಕೊಳಗಾದ ಟಿಡಿಆರ್ ಹಗರಣದ ಪ್ರಮುಖ ಆರೋಪಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಕೃಷ್ಣಲಾಲ್‍ನನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ.

ಆತನನ್ನು ಕೇಂದ್ರ ಕಚೇರಿಗೆ ಕರೆತಂದು ವಿಚಾರಣೆ ನಡೆಸಿದಾಗ ಬಿಬಿಎಂಪಿಯ ನೆಲಮಹಡಿಯಲ್ಲಿ ಪ್ರಮುಖ ದಾಖಲಾತಿಗಳನ್ನು ಬಚ್ಚಿಟ್ಟಿರುವುದು ಬಹಿರಂಗವಾಗಿದೆ. ಅದನ್ನು ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು ವಿಚಾರಣೆ ಮುಂದುವರೆಸಿದಾಗ ಕೆಲವು ದಾಖಲೆಗಳಲ್ಲಿ ಈ ಅಧಿಕಾರಿಗಳ ಹೆಸರು ಬಹಿರಂಗಗೊಂಡಿದೆ. ಹೀಗಾಗಿ ಇಂದು ಮುಂಜಾನೆಯೇ ದಾಳಿ ನಡೆಸಲಾಗಿದೆ.

ಎಸಿಬಿಯ ಮೂವರು ಡಿವೈಎಸ್‍ಪಿಗಳ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಪ್ರಮುಖ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ಇನ್ನಷ್ಟು ಮುಂದುವರೆದಿದ್ದು, ಕೆಲವು ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳ ಹಸ್ತಕ್ಷೇಪದ ಎಸಿಬಿ ಮಾಹಿತಿ ಕಲೆಹಾಕುತ್ತಿದೆ ಎಂದು ಹೇಳಲಾಗುತ್ತಿದೆ.

Facebook Comments