4 ಕಡೆ ಎಸಿಬಿ ದಾಳಿ : ಐವರು ಸರ್ಕಾರಿ ನೌಕರರು ಬಲೆಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.13- ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ಒಂದೇ ದಿನ ನಾಲ್ಕು ಕಡೆ ಟ್ರ್ಯಾಪ್ ಕಾರ್ಯಾಚರಣೆ ನಡೆಸಿ ಲಂಚ ಪಡೆಯುತ್ತಿದ್ದ ಐವರು ಸರ್ಕಾರಿ ನೌಕರರನ್ನು ಬಲೆಗೆ ಬೀಳಿಸಿಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆ, ಬಾದಾಮಿ ವೃತ್ತ ಕಂದಾಯ ನಿರೀಕ್ಷಕರಾದ ಶಿವರಾಯಪ್ಪ ಹನುಮಮಂತ ಜೋಗಿನ, ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ವಿಜಯಪುರ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ವಿಜಯ್‍ಕುಮಾರ್ ಮನ್ನೂರ ಮತ್ತು ಬೆಂಗಳೂರು ನಗರದ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್‍ಐ ಸೌಮ್ಯ ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳು.

ಗದಗ: ರೋಣ ತಾಲ್ಲೂಕು ಹೊಳೆ ಆಲೂರು ಗ್ರಾಮದ ನಿವಾಸಿಯೊಬ್ಬರು ತಂದೆಯ ಹೆಸರಿನಲ್ಲಿರುವ ತಮ್ಮ ಜಮೀನಿನ ಉತಾರೆಯ ಪತ್ಯಾಕಾಲಂನಲ್ಲಿ ಹೊಸ ಶರ್ತು ಕಡಿಮೆ ಮಾಡಿ ಹಳೆಯ ಶರ್ತು ಎಂದು ದಾಖಲು ಮಾಡಿ ಉತಾರೆ ಪೂರೈಸಲು ಬಾದಾಮಿ ತಹಸೀಲ್ದಾರರಿಗೆ ವರದಿ ಕಳುಹಿಸಿದ್ದರು. ಪದೀಯ ಕರ್ತವ್ಯಕ್ಕಾಗಿ ಬಾದಾಮಿ ವೃತ್ತ ಕಂದಾಯ ನಿರೀಕ್ಷಕ ಶಿವರಾಯಪ್ಪ ಹನುಮಮಂತ ಜೋಗಿ ಅವರು 5 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ಎಸಿಬಿಗೆ ಬಂದ ದೂರಿನನ್ವಯ ಅಧಿಕಾರಿಗಳು ದಾಳಿ ನಡೆಸಿ ಲಂಚದ ಹಣ ಪಡೆಯುತ್ತಿದ್ದ ವೇಳೆ ಬಲೆಗೆ ಬೀಳಿಸಿಕೊಂಡಿದ್ದಾರೆ. ಚಿತ್ರದುರ್ಗ: ಹೊಸದುರ್ಗ ತಾಲ್ಲೂಕು, ಕಲ್ಕೆರೆ ಗ್ರಾಮದ ನಿವಾಸಿಯೊಬ್ಬರು ತಮ್ಮ ಮಗಳು ಅಂತರ್ಜಾತಿ ವಿವಾಹ ಮಾಡಿಕೊಂಡಿರುವುದಕ್ಕೆ ಸರ್ಕಾರದಿಂದ ಬರುವ 3 ಲಕ್ಷ ಪ್ರೋತ್ಸಾಹ ಧನಕ್ಕಾಗಿ ಡಿ.25ರಂದು ಆನ್‍ಲೈನ್ ಮೂಲಕ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.

ಪ್ರೋತ್ಸಾಹ ಧನ ಮಂಜೂರು ಮಾಡಲು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಅವರು 15 ಸಾವಿರ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಪೈಕಿ 10 ಸಾವಿರ ಹಣ ಪಡೆದುಕೊಳ್ಳುತ್ತಿದ್ದಾಗ ಎಸಿಬಿ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಸಿಕ್ಕಿಬಿದ್ದಿದ್ದಾರೆ. ವಿಜಯಪುರ: ಸದಾಶಿವನಗರದ ನಿವಾಸಿಯೊಬ್ಬರು ತಮ್ಮ ಪತ್ನಿ ಹೆಸರಿನಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಕೆಐಎಡಿಬಿ ವ್ಯಾಪ್ತಿಯ ಮೆ:ನಂದಿ ಅಗ್ರೋ ಫುಡ್ ಇಂಡಸ್ಟ್ರೀಸ್‍ಅನ್ನು ಸಂಗನಗೌಡ ಪಾಟೀಲ್ ಎಂಬುವವರಿಂದ ಖರೀದಿ ಕರಾರು ಮಾಡಿಸಿಕೊಂಡಿದ್ದರು.

ಈ ಘಟಕಕ್ಕೆ ಸರ್ಕಾರದಿಂದ 20.87 ಲಕ್ಷ ರೂ. ಸಹಾಯಧನ ಬಿಡುಗಡೆಯಾಗಿತ್ತು. ಈ ಹಣವನ್ನು ಬಿಡುಗಡೆ ಮಾಡದೆ ತಡೆಹಿಡಿಯಬೇಕೆಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ವಿಜಯ್‍ಕುಮಾರ್ ಮನ್ನೂರ ಅವರು ಬ್ಯಾಂಕ್‍ನವರಿಗೆ ಪತ್ರ ಬರೆದಿದ್ದರು. ಈ ಬಗ್ಗೆ ವಿಜಯ್‍ಕುಮಾರ್ ಅವರನ್ನು ಕೇಳಿದಾಗ 1.46 ಲಕ್ಷ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅದರಂತೆ ಹಣ ಪಡೆದುಕೊಳ್ಳುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಬೆಂಗಳೂರು: ಚಾಮರಾಜಪೇಟೆ ನಿವಾಸಿಯೊಬ್ಬರು ಬಯ್ಯಪ್ಪನಹಳ್ಳಿ ಠಾಣೆಯ ಪ್ರಕರಣವೊಂದರ ಆರೋಪಿಯಿಂದ ಕಳ್ಳತನವಾಗಿದ್ದ ಮೊಬೈಲ್ ಪಡೆದಿದ್ದು, ಈ ವಿಚಾರವಾಗಿ ಪಿಎಸ್‍ಐ ಸೌಮ್ಯ ಅವರು ಅವರ ಮನೆ ಬಳಿ ಹೋಗಿ ಮೊಬೈಲ್ ಪಡೆದ ವ್ಯಕ್ತಿಯ ಪತ್ನಿಯನ್ನು ಸಂಪರ್ಕಿಸಿ ನಿಮ್ಮ ಪತಿಯನ್ನು ಬಂಧಿಸದೆ ಇರಲು 2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.

ಅದರಂತೆ ನಿನ್ನೆ ಮುಂಗಡವಾಗಿ ಸೌಮ್ಯ ಅವರ ಪರವಾಗಿ ಹೆಡ್‍ಕಾನ್ಸೇಟಬಲ್ ಜಯಪ್ರಕಾಶ್‍ರೆಡ್ಡಿ ಒಂದು ಲಕ್ಷ ಹಣ ಸ್ವೀಕರಿಸುತ್ತಿದ್ದಾಗ ಸೌಮ್ಯ ಹಾಗೂ ಜಯಪ್ರಕಾಶ್‍ರೆಡ್ಡಿ ಅವರು ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.  ಬಂಧಿತರಾಗಿರುವ ಸರ್ಕಾರಿ ನೌಕರರನ್ನು ವಿವಿಧ ನ್ಯಾಯಾಲಯಗಳ ಮುಂದೆ ಹಾಜರುಪಡಿಸಲಾಗಿದ್ದು, ಪ್ರಕರಣಗಳ ತನಿಖೆ ಮುಂದುವರಿದಿದೆ.

Facebook Comments