ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಏಕಕಾಲಕ್ಕೆ ಎಸಿಬಿ ದಾಳಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.19- ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಏಕ ಕಾಲಕ್ಕೆ ದಾಳಿ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಆದಾಯಕ್ಕಿಂತ ಹೆಚ್ಚು ಸಂಪಾದನೆ ಮಾಡಿದ್ದ ನಾಲ್ವರು ಅಧಿಕಾರಿಗಳ ಬಣ್ಣ ಬಯಲು ಮಾಡಿದ್ದಾರೆ.

ಗದಗ, ವಿಜಯಪುರ ಮತ್ತು ಬೆಂಗಳೂರಿನಲ್ಲಿರುವ ನಾಲ್ವರು ಅಧಿಕಾರಿಗಳ ಮನೆ ಮೇಲೆ ಏಕ ಕಾಲಕ್ಕೆ ದಾಳಿ ನಡೆಸಿ ಆದಾಯಕ್ಕಿಂತ ಹೆಚ್ಚು ಸಂಪಾದನೆ ಮಾಡಿದ್ದ ದಾಖಲೆಗಳನ್ನು ಎಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಬಸವೇಶ್ವರ ನಗರದಲ್ಲಿರುವ ಸಹಕಾರ ಇಲಾಖೆ ಹೆಚ್ಚುವರಿ ರಿಜಿಸ್ಟ್ರಾರ್ ಸತೀಶ್. ಬಿ.ಸಿ ಅವರ ಮನೆ ಹಾಗೂ ಆರ್‍ಪಿಸಿ ಲೇ ಔಟ್‍ನಲ್ಲಿರುವ ಸಂಬಂಧಿಕರ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಬಿಬಿಎಂಪಿ ಜೀವನ್ ಭಿಮಾ ನಗರದ ಉಪ ವಲಯದಲ್ಲಿ ಸಹ ಕಂದಾಯಾಧಿಕಾರಿಯಾಗಿರುವ ಮಂಜುನಾಥ್.ಎಸ್.ಪಿ ಅವರ ನಾಯಂಡಹಳ್ಳಿ ನಿವಾಸ, ಕಚೇರಿ ಹಾಗೂ ಹಾಸನದ ಚನ್ನರಾಯಪಟ್ಟಣದಲ್ಲಿರುವ ಅವರ ಸಂಬಂಧಿಕರ ನಿವಾಸಗಳ ಮೇಲೂ ದಾಳಿ ನಡೆದಿದೆ.

ವಿಜಯಪುರದಲ್ಲಿ ಕೆಆರ್‍ಐಡಿಎಲ್ ಉಪ ನಿರ್ದೇಶಕರಾಗಿರುವ ಶರದ್ ಗಂಗಪ್ಪ ಐಜಿರಿ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿರುವ ಎಸಿಬಿ ಪೊಲೀಸರು ಹಲವಾರು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಗದಗದ ಮುಂಡರಗಿ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿಯಾಗಿರುವ ಪ್ರಕಾಶ್ ಗೌಡ ಕುಡಾರಿ ಮೋತಿ ಅವರ ಎರಡು ಮನೆಗಳು ಹಾಗೂ ಮುಂಡರಗಿ ಕಚೇರಿಗಳ ಮೇಲೆ ಎಸಿಬಿ ಪೊಲೀಸರು ರೈಡ್ ಮಾಡಿದ್ದಾರೆ.

ಸರ್ಕಾರಿ ಸೇವೆಯಲ್ಲಿರುವ ಈ ಅಧಿಕಾರಿಗಳು ಜನ ಸೇವೆ ಮರೆತು ಹಣ ಲೂಟಿ ಹೊಡೆಯುತ್ತಿದ್ದಾರೆ ಎಂಬ ಕುರಿತಂತೆ ಸಾರ್ವಜನಿಕರಿಂದ ಬಂದ ದೂರನ್ನು ಆದರಿಸಿ ಎಸಿಬಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ದಾಳಿ ಸಂದರ್ಭದಲ್ಲಿ ಭ್ರಷ್ಟ ಅಧಿಕಾರಿಗಳ ಮನೆಯಲ್ಲಿ ಕೋಟ್ಯಂತರ ಮೌಲ್ಯದ ಚರ ಮತ್ತು ಚಿರಾಸ್ತಿಗಳು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲ ಅಧಿಕಾರಿಗಳ ನಿವಾಸದಲ್ಲಿ ಕಾರ್ಯಾಚರಣೆ ಮುಂದುವರೆದಿದೆ.

Facebook Comments

Sri Raghav

Admin