ಟಿಡಿಆರ್ ಹಗರಣ : ಇಬ್ಬರು ಸರ್ವೇಯರ್ಗಳ ಮನೆ ಮೇಲೆ ಎಸಿಬಿ ದಾಳಿ
ಬೆಂಗಳೂರು, ಮೇ 1- ಟಿಡಿಆರ್ ಹಗರಣದಲ್ಲಿ ಬಿಬಿಎಂಪಿ ಮತ್ತು ಬಿಡಿಎ ಅಸಲಿ ಕಡತಗಳನ್ನು ಮನೆಯಲ್ಲಿಟ್ಟುಕೊಂಡಿದ್ದ ಇಬ್ಬರು ಖಾಸಗಿ ಸರ್ವೇಯರ್ಗಳ ಮನೆಗಳ ಮೇಲೆ ದಾಳಿ ನಡೆಸಿರುವ ಎಸಿಬಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಟಿಡಿಆರ್ ಹಗರಣದಲ್ಲಿ ಇತ್ತೀಚೆಗೆ ಬಿಡಿಎ ಇಂಜಿನಿಯರ್ ಕೃಷ್ಣಲಾಲ್ ಮನೆ ಮೇಲೆ ದಾಳಿ ನಡೆದಿತ್ತು. ಪ್ರಕರಣದ ವಿಚಾರಣೆ ಮುಂದುವರೆದಾಗ ಖಚಿತ ಮಾಹಿತಿ ದೊರೆತಿದ್ದು, ಅದನ್ನು ಆಧರಿಸಿ ಇಂದು ಬೆಳಗ್ಗೆ ಆರ್ಎಂವಿ ಲೇಔಟ್ನ 2ನೇ ಹಂತದ ನಿವಾಸಿ ಅಭಿಷೇಕ್, ಗೆದ್ದಲಹಳ್ಳಿ ನಿವಾಸಿ ಮನೋಜ್ ಮನೆ ಮೇಲೆ ದಾಳಿ ನಡೆಸಲಾಗಿದೆ.
ಈ ಸಂದರ್ಭದಲ್ಲಿ ಟಿಡಿಆರ್ಗೆ ಸಂಬಂಧಪಟ್ಟಂತೆ ಒರಿಜಿನಲ್ ಫೈಲ್ಗಳು ಪತ್ತೆಯಾಗಿದ್ದು, ಅವುಗಳನ್ನು ಜಪ್ತಿ ಮಾಡಲಾಗಿದೆ. ಈ ಇಬ್ಬರೂ ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಕೃಷ್ಣಲಾಲ್ ನಾಪತ್ತೆ: ಎಸಿಬಿ ತನಿಖೆ ತೀವ್ರಗೊಂಡಂತೆ ಇಂಜಿನಿಯರ್ ಕೃಷ್ಣಲಾಲ್ ನಾಪತ್ತೆಯಾಗಿದ್ದು, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆ ಮುಂದುವರೆದಿದ್ದು, ಇನ್ನಷ್ಟು ದಾಳಿಗಳು ನಡೆಯುವ ಸಾಧ್ಯತೆ ಇದೆ.
ವಿಶೇಷ ತಂಡ ರಚನೆ: ಟಿಡಿಆರ್ ಭಾರೀ ದೊಡ್ಡ ಹಗರಣವಾಗಿದ್ದು, ಇದರ ತನಿಖೆಗಾಗಿ ವಿಶೇಷ ತನಿಖಾ ತಂಡ ರಚನೆ ಮಾಡುವಂತೆ ತನಿಖಾಧಿಕಾರಿಗಳು ಮನವಿ ಮಾಡಿದ್ದಾರೆ.
ಬೆಂಗಳೂರಿನಾದ್ಯಂತ ಸಾವಿರಾರು ಕೋಟಿ ರೂ. ಮೊತ್ತದ ಈ ಹಗರಣದ ಹಿಂದೆ ದೊಡ್ಡ ಜಾಲವೇ ಇದ್ದು, ಅದನ್ನು ಇನ್ನಷ್ಟು ಚುರುಕಾಗಿ ತನಿಖೆ ಮಾಡಲು ವಿಶೇಷ ತಂಡ ರಚಿಸುವಂತೆ ಮನವಿ ಮಾಡಲಾಗಿದ್ದು, ರಾಜ್ಯ ಸರ್ಕಾರವೂ ಅದಕ್ಕೆ ಸಮ್ಮತಿಸಿ ಎಂದು ತಿಳಿದುಬಂದಿದೆ.