ವಾಲ್‍ಮಾರ್ಟ್ ಕಂಪನಿಯ ಪ್ರಮುಖರ ಮನೆ, ಕಚೇರಿ ಸೇರಿ ಐದು ಕಡೆ ಎಸಿಬಿ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮೇ4-ನಗರದ ಟಿಡಿಆರ್ ಹಗರಣದ ವಿಚಾರಣೆಯನ್ನು ತೀವ್ರಗೊಳಿಸಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಪೊಲೀಸರು ವಾಲ್‍ಮಾರ್ಟ್ ಖಾಸಗಿ ಕಂಪನಿಯ ಪ್ರಮುಖರ ಮನೆ ಮತ್ತು ಕಚೇರಿ ಸೇರಿದಂತೆ ಐದು ಕಡೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

ನಗರದ ರಸ್ತೆವೊಂದರ ಅಗಲೀಕರಣದ ಟಿಡಿಆರ್‍ನಲ್ಲಿ ಭಾರೀ ಹಗರಣ ನಡೆದಿದೆ ಎಂದು ದೂರು ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ತನಿಖೆ ಕೈಗೆತ್ತಿಕೊಂಡಿರುವ ಸಿಸಿಬಿ ಪೊಲೀಸರು ಬಿಡಿಎ ಸಹಾಯಕ ಇಂಜಿನಿಯರ್ ಕೃಷ್ಣಲಾಲ್ ಅವರ ಆಪ್ತರಾದ ದೀಪಕ್‍ಕುಮಾರ್, ಅಮಿತ್ ರಿಕಬ್ ಚಂದ್ ಜೈನ್ ಎಂಬುವರ ಮನೆ ಮೇಲೆ ಈಗಾಗಲೇ ದಾಳಿ ನಡೆಸಿದ್ದರು.

ಇಂದು ವಾಲ್‍ಮಾರ್ಟ್‍ನ ಕಂಪನಿಯ ಮುಖ್ಯಸ್ಥರಾದ ರತನ್ ಲಾಲ್, ವ್ಯವಸ್ಥಾಪಕರಾದ ಅಮಿತ್ ಬೋಳಾರ್, ಏಜೆಂಟರ್‍ಗಳಾದ ಮುನಿರಾಜು, ಗೌತಮ್ ಅವರುಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಎಸ್ಪಿ ಸಂಜೀವ್ ಪಾಟೀಲ್ ಮಾರ್ಗದರ್ಶನ, ಡಿವೈಎಸ್ಪಿ ರವಿಕುಮಾರ್ ನೇತೃತ್ವದಲ್ಲಿ 5 ತಂಡಗಳ ಎಸಿಬಿ ಅಧಿಕಾರಿಗಳು ಬೆಳಗ್ಗೆ 6 ಗಂಟೆಯಿಂದಲೂ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ರತನ್‍ಲಾಲ್ ಅವರ ಎನ್‍ಕ್ಲೈವ್ ಫ್ಲಾಟ್ ಮೇಲೆ, ರೆಸಿಡೆನ್ಸಿ ರಸ್ತೆಯಲ್ಲಿರುವ ಅವರ ಕಚೇರಿ ಮೇಲೆ,ಇಂದಿರಾನಗರದಲ್ಲಿರುವ ಅಮಿತ್ ಬೋಳಾರ್ ಅವರ ಮನೆ, ಕೆಆರ್‍ಪುರಂ ಬಳಿಯ ರಾಮಮೂರ್ತಿನಗರ ಬಳಿಯ ಮುನಿರಾಜು ಹಾಗೂ ಗೌತಮ್ ಮನೆಗಳ ಮೇಲೆ ದಾಳಿ ನಡೆದಿದೆ.

ಈ ವೇಳೆ ಎಲ್ಲ ಆರೋಪಿಗಳು ಪರಾರಿಯಾಗಿದ್ದಾರೆ. ಟಿಡಿಆರ್ ಹಗರಣದಲ್ಲಿ ಈವರೆಗೂ ಸುಮಾರು 8 ಮಂದಿ ಆರೋಪಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆದಿದೆ.  ಎಲ್ಲ ಆರೋಪಿಗಳು ತಲೆತಪ್ಪಿಸಿಕೊಂಡಿದ್ದು, ನಿರೀಕ್ಷಣಾ ಜಾಮೀನಿನ ಮೊರೆ ಹೋಗಿದ್ದಾರೆ.

ಇಂದು ನಡೆದ ದಾಳಿಯಲ್ಲಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಿಬಿಎಂಪಿ ಇಂಜಿನಿಯರ್ ಆಗಿದ್ದ ಪ್ರಮುಖ ಆರೋಪಿ ಕೃಷ್ಣಲಾಲ್ ಅಕ್ರಮವಾಗಿ ನೀಡುತ್ತಿದ್ದ ಟಿಡಿಆರ್‍ನ್ನು ವಾಲ್‍ಮಾರ್ಟ್ ಕಂಪನಿ ಮೂಲಕ ಪರಭಾರೆ ಮಾಡಲಾಗುತ್ತಿದ್ದು, ಬಹಳಷ್ಟು ದೊಡ್ಡ ದೊಡ್ಡ ಬಿಲ್ಡರ್‍ಗಳಿಗೆ, ರಿಯಲ್ ಎಸ್ಟೇಟ್ ಕಂಪನಿಗಳಿಗೆ ಟಿಡಿಆರ್‍ನ್ನು ಹತ್ತಾರು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ. ದಾಳಿಯ ವೇಳೆ ಹಲವಾರು ದಾಖಲಾತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸಿಬಿ ತಿಳಿಸಿದೆ.

Facebook Comments

Sri Raghav

Admin