4 ಜನ ಹಿರಿಯ ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.21- ಅಕ್ರಮ ಆಸ್ತಿ ಸಂಪಾದನೆ ಆರೋಪಕ್ಕೆ ಗುರಿಯಾಗಿರುವ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರು ಸೇರಿದಂತೆ ನಾಲ್ಕು ಹಿರಿಯ ಅಧಿಕಾರಿಗಳ ಮನೆ ಹಾಗೂ ಕಚೇರಿ ಸೇರಿದಂತೆ ವಿವಿಧ ಸ್ಥಳಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆಯ ತೆರಿಗೆ ಮೇಲ್ಮನವಿ ಸಮಿತಿ ವಿಭಾಗ 5ರ ಜಂಟಿ ಆಯುಕ್ತರಾಗಿರುವ ಎಂ.ಬಿ.ನಾರಾಯಣಸ್ವಾಮಿ ಅವರ ಶಾಂತಿನಗರದ ಕಚೇರಿ, ಮೈಸೂರಿನ ಪಿರಿಯಾಪಟ್ಟಣದಲ್ಲಿ ಪಂಚಾಯತ್‍ರಾಜ್ ಇಂಜಿನಿಯರಿಂಗ್ ಉಪವಿಭಾಗದ ಕಿರಿಯ ಇಂಜಿನಿಯರ್ ಆಗಿರುವ ಹರ್ಷದ್ ಪಾಷ, ರಾಮನಗರದ ಬಮೂಲ್‍ನ ವ್ಯವಸ್ಥಾಪಕರಾದ ಡಾ.ಶಿವಶಂಕರ್, ಲೋಕೋಪಯೋಗಿ ಇಲಾಖೆಯ ಹಾಸನ ವಿಶೇಷ ವಿಭಾಗದ ಸಹಾಯಕ ಇಂಜಿನಿಯರ್ ಎಚ್.ಎಸ್.ಚನ್ನೇಗೌಡ ಮನೆ ಮತ್ತು ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದರು.

ಶಿವಶಂಕರ್, ನಾರಾಯಣಸ್ವಾಮಿ, ಚೆನ್ನೇಗೌಡ ಅವರಿಗೆ ಸೇರಿದ ಮೂರು ಸ್ಥಳಗಳ ಮೇಲೆ, ಹರ್ಷದ್ ಪಾಷ ಅವರಿಗೆ ಸೇರಿದ ಎರಡು ಸ್ಥಳಗಳ ಮೇಲೆ ದಾಳಿ ನಡೆದಿದೆ.  ಮೈಸೂರು, ಬೆಂಗಳೂರು ಮತ್ತು ಕೇಂದ್ರಕಚೇರಿಯ ಅಧಿಕಾರಿಗಳು ಸಮನ್ವಯತೆಯಿಂದ ದಾಳಿ ನಡೆಸಲಾಗಿದ್ದು, ನಾಲ್ವರು ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲಾಗಿದೆ.

ನಾರಾಯಣಸ್ವಾಮಿ ಅವರ ವಿರುದ್ದ ಚಿಕ್ಕಬಳ್ಳಾಪುರ ಎಸಿಬಿ ಠಾಣೆಯಲ್ಲಿ, ಹರ್ಷದ್ ಪಾಷ ಅವರ ಮೇಲೆ ಮೈಸೂರು ಎಸಿಬಿ ಠಾಣೆಯಲ್ಲಿ, ಚೆನ್ನೆಗೌಡರ ವಿರುದ್ಧ ಹಾಸನ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಾಣಿಜ್ಯ ತೆರಿಗೆ ಜಂಟಿ ನಿರ್ದೇಶಕರಾದ ನಾರಾಯಣಸ್ವಾಮಿ ಅವರ ಮಾವನ ಮನೆ ಮೇಲೂ ದಾಳಿ ನಡೆದಿದೆ. ಚಿಂತಾಮಣಿ ಮತ್ತು ಜಯನಗರದಲ್ಲಿರುವ ಸ್ವಂತ ಮನೆಗಳ ಪರಿಶೀಲನೆ ನಡೆಸಲಾಗಿದೆ ಎಂದು ಎಸಿಬಿ ಪ್ರಕಟಣೆ ತಿಳಿಸಿದೆ. ದಾಳಿಯ ವೇಳೆ ಅಪಾರ ಪ್ರಮಾಣದ ಅಕ್ರಮ ಆಸ್ತಿಗಳನ್ನು ಪತ್ತೆಹಚ್ಚಲಾಗಿದೆ ಎಂದು ತಿಳಿದುಬಂದಿದೆ.

Facebook Comments

Sri Raghav

Admin