ನಾಲ್ಕು ಅಧಿಕಾರಿಗಳ ಮನೆ, ಕಚೇರಿ ಸೇರಿ 14 ಕಡೆ ಎಸಿಬಿ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.10- ಬೆಳ್ಳಂಬೆಳಗ್ಗೆ ನಾಲ್ವರು ಭ್ರಷ್ಟ ಅಧಿಕಾರಿಗಳ ಮನೆ ಬಾಗಿಲು ಬಡಿದಿರುವ ಎಸಿಬಿ ಪೊಲೀಸರು ಏಕಕಾಲಕ್ಕೆ 14 ಸ್ಥಳಗಳ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಪತ್ತೆಹಚ್ಚಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಎಲ್.ಸತೀಶ್‍ಕುಮಾರ್, ಕೋಲಾರ ಜಿಲ್ಲೆಯ ವಲಯ ಅರಣ್ಯಾಧಿಕಾರಿ ಎನ್.ರಾಮಕೃಷ್ಣ, ರಾಯಚೂರು ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯನಿರ್ವಾಹಕ ಅಭಿಯಂತ ಗೋಪಶೆಟ್ಟಿ ಮಲ್ಲಿಕಾರ್ಜುನ ಹಾಗೂ ಬಾಗಲಕೋಟೆ ಕೃಷ್ಣಭಾಗ್ಯ ಜಲನಿಗಮದ ಸಹಾಯಕ ಅಭಿಯಂತ ರಾಘಪ್ಪ ಲಾಲಪ್ಪ ಲಮಾಣಿ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು.

ಈ ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂಬ ವಿಶ್ವಾಸಾರ್ಹ ಮಾಹಿತಿ ಮೇರೆಗೆ ಇಂದು ಬೆಳ್ಳಂಬೆಳಗ್ಗೆ ದಾಳಿಗಿಳಿದ ಎಸಿಬಿ ಪೊಲೀಸರು ನಾಲ್ವರು ಅಧಿಕಾರಿಗಳು ಸಂಪಾದಿಸಿದ್ದ ಅಕ್ರಮ ಆಸ್ತಿ ಪತ್ತೆಹಚ್ಚಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಸತೀಶ್‍ಕುಮಾರ್ ಅವರ ಮೈಸೂರಿನ ಟಿ.ಕೆ.ಲೇಔಟ್‍ನಲ್ಲಿರುವ ವಾಸದ ಮನೆ, ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಬಾಡಿಗೆ ಮನೆ ಹಾಗೂ ಗಾಂಧಿನಗರದಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆ ಕಚೇರಿಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ದಾಳಿ ನಡೆಸಿದ್ದಾರೆ.

ಕೋಲಾರ ಜಿಲ್ಲೆ ಶ್ರೀನಿವಾಸಪುರ ವಲಯ ಅರಣ್ಯಾಧಿಕಾರಿಯಾಗಿರುವ ರಾಮಕೃಷ್ಣ ಅವರ ಕೋಲಾರ, ಬಂಗಾರಪೇಟೆ ಮತ್ತು ವಿಜಯನಗರದಲ್ಲಿರುವ ನಿವಾಸ, ಮಿಟ್ಟಹಳ್ಳಿಯಲ್ಲಿರುವ ಸ್ವಗ್ರಾಮದ ಮನೆ, ಸ್ನೇಹಿತನ ಮನೆ ಹಾಗೂ ಬೆಂಗಳೂರಿನ ವಾಸದ ಮನೆ ಮತ್ತು ವಲಯ ಅರಣ್ಯಾಧಿಕಾರಿ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

ರಾಯಚೂರು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಜಿಲ್ಲಾ ನಗರಾಭಿವೃದ್ಧಿ ಕೋಶದ ಇಇ ಆಗಿರುವ ಗೋಪಶೆಟ್ಟಿ ಅವರ ರಾಯಚೂರಿನ ಐಡಿಎಸ್‍ಎಂಟಿ ಲೇಔಟ್, ಮಂತ್ರಾಲಯ ರಸ್ತೆಯಲ್ಲಿರುವ ವಾಸದ ಮನೆ, ಲಿಂಗಸಗೂರು ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್, ರಾಯಚೂರು-ಲಿಂಗಸಗೂರು ಹೆದ್ದಾರಿಯಲ್ಲಿರುವ ಟ್ರ್ಯಾಕ್ಟರ್ ಶೋ ರೂಮ್ ಮತ್ತು ಅವರ ಕಚೇರಿಯ ಮೇಲೆ ದಾಳಿ ನಡೆದಿದೆ.

ಅದೇ ರೀತಿ ಕೃಷ್ಣಭಾಗ್ಯ ಜಲನಿಗಮದ ಸಹಾಯಕ ಅಭಿಯಂತ ರಾಘಪ್ಪ ಲಾಲಪ್ಪ ಲಮಾಣಿ ಅವರ ಬಾಗಲಕೋಟೆಯ ವಿದ್ಯಾಗಿರಿಯಲ್ಲಿರುವ ವಾಸದ ಮನೆ, ಆತನ ಸಹೋದರನ ಮಾಲಿಕತ್ವದ ಸಿರಗುಪ್ಪೆ ರಸ್ತೆಯಲ್ಲಿರುವ ಮನೆ ಮತ್ತು ಕೃಷ್ಣ ಭಾಗ್ಯ ಜಲನಿಗಮದ ಹಲವಾರು ಕಚೇರಿಗಳ ಮೇಲೆ ದಾಳಿ ನಡೆಸಿರುವ ಎಸಿಬಿ ಪೊಲೀಸರು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಿಂದ ಕೋಟ್ಯಂತರ ರೂ. ಅಕ್ರಮ ಆಸ್ತಿ ಪತ್ತೆಹಚ್ಚಲಾಗಿದ್ದು, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿರುವ ಎಸಿಬಿ ಪೊಲೀಸರ ತಂಡ ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಕೈಗೊಂಡಿದೆ.

Facebook Comments