ಹೊಟ್ಟೆಗೆ ಊಟ ಮಾಡ್ತಾರೋ, ನೋಟು ತಿಂತಾರೋ..? ಕೈ ಇಟ್ಟಲೆಲ್ಲಾ ಕಂತೆ ಕಂತೆ ಹಣ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.2- ಈ ಭ್ರಷ್ಟ ಅಧಿಕಾರಿ ಹೊಟ್ಟೆಗೆ ಊಟ ಮಾಡ್ತಾರೋ, ನೋಟು ತಿಂತಾರೋ ಗೊತ್ತಿಲ್ಲ… ಬೆಳ್ಳಂಬೆಳಗ್ಗೆ ಎಸಿಬಿ ಪೊಲೀಸರು ಇವರ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಕೈ ಇಟ್ಟಲೆಲ್ಲಾ ಕಂತೆ ಕಂತೆ ಹಣ ಸಿಕ್ಕಿದೆ. ಯಾರಪ್ಪ ಅಂತಾ ಭಾರೀ ಕುಳ ಅಂತೀರಾ…. ಅವರೇ ಬೆಂಗಳೂರು ಸಹಕಾರಿ ಇಲಾಖೆ ವಲಯದ ಜಂಟಿನಿಬಂಧಕ ಪಾಂಡುರಂಗ ಗರಗ್. ಜಂಟಿ ನಿಬಂಧಕರಾಗಿರುವ ಪಾಂಡುರಂಗ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ವಿಜಯನಗರದಲ್ಲಿರುವ ಅಧಿಕಾರಿಯ ನಿವಾಸ ಹಾಗೂ ಆತನಿಗೆ ಸಂಬಂಧಿಸಿದ ಐದು ಕಡೆ ಏಕಕಾಲಕ್ಕೆ ದಾಳಿ ನಡೆಸಿದಾಗ ಕಂತೆ ಕಂತೆ ನೋಟು, ಭಾರೀ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ.

ವಿಜಯನಗರದಲ್ಲಿರುವ ನಿವಾಸದಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ಎಲ್ಲೆಂದರಲ್ಲಿ ಅಡಗಿಸಿಟ್ಟಿದ್ದ ನೋಟಿನ ಕಂತೆಗಳು, ವಿವಿಧ ಆಸ್ತಿಗಳ ದಾಖಲೆ ಪತ್ರಗಳು ಎಸಿಬಿ ಪೊಲೀಸರಿಗೆ ಸಿಕ್ಕಿವೆ. ಜಯನಗರದಲ್ಲಿರುವ ಪಾಂಡುರಂಗ ಅವರ ಸಂಬಂಧಿಕರ ಮನೆ ಹಾಗೂ ಚಿತ್ರದುರ್ಗ ಮತ್ತು ಹೊಸದುರ್ಗದಲ್ಲಿರುವ ಮನೆಗಳ ಮೇಲೂ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

ದಾಳಿ ಸಂದರ್ಭದಲ್ಲಿ ಅಪಾರ ಪ್ರಮಾಣದ ಸಂಪತ್ತು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ದಾಖಲೆಗಳನ್ನು ವಶಕ್ಕೆ ಪಡೆದು ಸಂಪತ್ತಿನ ಲೆಕ್ಕಾಚಾರ ನಡೆಸಲು ಸಂಜೆಯಾಗಬಹುದು ಎಂದು ಎಸಿಬಿ ಪೊಲೀಸರು ತಿಳಿಸಿದ್ದಾರೆ. ಪಾಂಡುರಂಗ ಅವರಿಗೆ ಸೇರಿದ ಐದು ಮನೆಗಳ ಮೇಲಲ್ಲದೆ, ರಾಜ್ಯದ ವಿವಿಧೆಡೆ ಏಳು ಭ್ರಷ್ಟ ಅಧಿಕಾರಿಗಳ 30 ಮನೆಗಳ ಮೇಲೂ ಏಕಕಾಲಕ್ಕೆ ಎಸಿಬಿ ಪೊಲೀಸರು ಮುಗಿ ಬಿದ್ದು ಭಾರೀ ಅಕ್ರಮ ಆಸ್ತಿ ಪತ್ತೆಹಚ್ಚಿದ್ದಾರೆ.

ಧಾರವಾಡದ ಶಿಗ್ಗಾವಿ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ದೇವರಾಜ್ ಕಲ್ಲೇಶ್, ಧಾರವಾಡ ಅರಣ್ಯ ಇಲಾಖೆಯ ಎಸಿಎಫ್ ಶ್ರೀನಿವಾಸ್, ಮಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನೆ ಜಂಟಿ ನಿರ್ದೇಶಕ ಕೆ.ವಿ.ಜಯರಾಜ್, ಕೋಲಾರ ಡಿಎಚ್‍ಒ ಡಾ.ಎಸ್.ಎನ್.ವಿಜಯ್‍ಕುಮಾರ್, ಕೊಪ್ಪಳದ ಕೆಐಎಂಎಸ್ ಆಸ್ಪತ್ರೆಯ ಎಚ್‍ಒಡಿ ಡಾ.ಶ್ರೀನಿವಾಸ್ ಹಾಗೂ ಲೋಕೋಪಯೋಗಿ ಇಲಾಖೆಯ ಮಾಗಡಿ ಉಪವಲಯದ ಜೂನಿಯರ್ ಇಂಜಿನಿಯರ್ ಚನ್ನಬಸಪ್ಪ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು. ಎಸಿಬಿ ರಚನೆಯಾದ ನಂತರ ನಡೆದ ಭಾರೀ ಪ್ರಮಾಣದ ದಾಳಿ ಇದಾಗಿದ್ದು, 7 ಭ್ರಷ್ಟ ಅಧಿಕಾರಿಗಳಿಂದ ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆಹಚ್ಚಲಾಗಿದೆ.

# ಕೋಲಾರ ವರದಿ:
ಕೋಲಾರದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಸ್.ಎನ್.ವಿಜಯ್‍ಕುಮಾರ್ ಅವರಿಗೆ ಸೇರಿದ ಮನೆ, ಕಚೇರಿ, ಮುಳಬಾಗಿಲು, ಚಿಂತಾಮಣಿ, ಬೆಂಗಳೂರಿನ ಮನೆ ಹಾಗೂ ಅವರ ಖಾಸಗಿ ಆಸ್ಪತ್ರೆ ಸೇರಿದಂತೆ ಆರು ಕಡೆ ಡಿವೈಎಸ್‍ಪಿ ಪುರುಷೋತ್ತಮ್ ನೇತೃತ್ವದ ಎಸಿಬಿ ಪೊಲೀಸರ ತಂಡ ಏಕಕಾಲಕ್ಕೆ ದಾಳಿ ನಡೆಸಿ ಅಕ್ರಮ ಆಸ್ತಿ ಪತ್ತೆಹಚ್ಚಿದ್ದು, ಆಸ್ತಿ ದಾಖಲೆ ಪರಿಶೀಲನೆ ನಡೆಸುತ್ತಿದೆ.

# ಧಾರವಾಡದಲ್ಲೂ ದಾಳಿ:
ಧಾರವಾಡದ ಸಣ್ಣ ನೀರಾವರಿ ಇಲಾಖೆಯ ಎಇಇ ದೇವರಾಜ್ ಕಲ್ಲೇಶ್ ಅವರ ನಿವಾಸ, ತಾಯಿ ಹಾಗೂ ಮಾವನ ಮನೆಗಳ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೇವರಾಜ್ ಅವರ ಅಕ್ಷಯ ಪಾರ್ಕ್ ಸಮೀಪದ ರಾಜೀವನಗರ ನಿವಾಸ, ಗೋಕುಲ ರಸ್ತೆಯ ಕೋಟಲಿಂಗನಗರದಲ್ಲಿರುವ ತಾಯಿ ಮನೆ ಹಾಗೂ ಬೆಂಗೇರಿ ಬಳಿಯ ಬಾಲಾಜಿನಗರದಲ್ಲಿರುವ ಮಾವನ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಅಕ್ರಮ ಆಸ್ತಿಗಳ ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದೆ. ಅದೇ ರೀತಿ ಅರಣ್ಯ ಇಲಾಖೆಯ ಎಸಿಎಫ್ ಶ್ರೀನಿವಾಸ್ ಅವರ ಹಲವಾರು ಮನೆ, ಕಚೇರಿಗಳ ಮೇಲೂ ಹುಬ್ಬಳ್ಳಿ-ಧಾರವಾಡ ಎಸಿಬಿ ಪೊಲೀಸರ ತಂಡ ದಾಳಿ ನಡೆಸಿ ಅಕ್ರಮ ಸಂಪತ್ತು ಬಯಲಿಗೆಳೆದಿದೆ.

# ಜಂಟಿ ನಿರ್ದೇಶಕರಿಗೆ ಶಾಕ್:
ಮಂಗಳೂರು ಮಹಾನಗರ ಪಾಲಿಕೆ ನಗರ ಯೋಜನೆ ವಿಭಾಗದ ಜಂಟಿ ನಿರ್ದೇಶಕ ಕೆ.ವಿ.ಜಯರಾಜ್ ಅವರು ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ದೂರಿನ ಮೇರೆಗೆ ಇಂದು ಮುಂಜಾನೆ ದಾಳಿ ನಡೆಸಿದ ಮಂಗಳೂರು ಎಸಿಬಿ ಪೊಲೀಸರು ಭ್ರಷ್ಟ ಅಧಿಕಾರಿಗೆ ಸೇರಿದ ಹಲವಾರು ಮನೆ, ಕಚೇರಿ, ಸಂಬಂಧಿಕರು ಮತ್ತು ಸ್ನೇಹಿತರ ನಿವಾಸಗಳ ಮೇಲೂ ದಾಳಿ ನಡೆಸಿದ್ದಾರೆ.

# ಕೊಪ್ಪಳದಲ್ಲೂ ದಾಳಿ:
ಕೊಪ್ಪಳದ ಕಿಮ್ಸ್ ಔಷಧ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ್ ಅವರ ಮನೆ, ಕಚೇರಿಗಳ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಭಾರೀ ಪ್ರಮಾಣದ ಅಕ್ರಮ ಸಂಪತ್ತು ಪತ್ತೆ ಹಚ್ಚಿದ್ದಾರೆ. ಅದೇ ರೀತಿ ಮಾಗಡಿ ಲೋಕೋಪಯೋಗಿ ಇಲಾಖೆಯಲ್ಲಿ ಜೂನಿಯರ್ ಇಂಜಿನಿಯರ್ ಆಗಿರುವ ಚನ್ನಬಸಪ್ಪ ಅವರೂ ಎಸಿಬಿ ಬಲೆಗೆ ಬಿದ್ದಿದ್ದಾರೆ. ಒಟ್ಟಾರೆ ಇಂದು ಎಸಿಬಿ ಅಧಿಕಾರಿಗಳು ಏಳು ಭ್ರಷ್ಟ ಅಧಿಕಾರಿಗಳ 30ಕ್ಕೂ ಹೆಚ್ಚು ಮನೆ, ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಭಾರೀ ಪ್ರಮಾಣದ ಅಕ್ರಮ ಸಂಪತ್ತನ್ನು ಬಯಲಿಗೆಳೆದಿದ್ದಾರೆ.

Facebook Comments