ಎಸಿಬಿ ಬಲೆಗೆ ಬಿದ್ದ ಬಿಬಿಎಂಪಿ ತಿಮಿಂಗಲ, ಮಹತ್ವದ ದಾಖಲೆಗಳು ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.26- ಟಿಡಿಆರ್ ವಿತರಣೆ ಯಲ್ಲಿ ಭಾರೀ ಗೋಲ್‍ಮಾಲ್ ನಡೆಸಿ ಬಿಬಿಎಂಪಿ ಬೊಕ್ಕಸಕ್ಕೆ ಕೋಟ್ಯಂತರ ರೂ. ವಂಚಿಸಿ ಬಿಡಿಎಗೆ ವರ್ಗಾವಣೆಗೊಂಡಿದ್ದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಕೃಷ್ಣ ಲಾಲ್ ಮತ್ತು ಇತರ ಇಬ್ಬರು ಖಾಸಗಿ ವ್ಯಕ್ತಿಗಳ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ಎಸಿಬಿ ಪೊಲೀಸರು ಮಹತ್ವದ ದಾಖಲೆಗಳನ್ನು ವಶ ಪಡಿಸಿಕೊಂಡಿದ್ದಾರೆ.

ಕೃಷ್ಣ ಲಾಲ್ ಅವರ ನಿವಾಸ ಮತ್ತು ಕಚೇರಿಗಳು, ಟೆಲಿಕಾಂ ಬಡಾವಣೆಯಲ್ಲಿರುವ ದೀಪಕ್ ಕುಮಾರ್, ಗಾಂಧಿನಗರ ಹಾಗೂ ಚಿಕ್ಕಪೇಟೆಯಲ್ಲಿರುವ ಅಮೀತ್ ರಿಕಬ್ ಚಂದ್ ಜೈನ್ ಅವರ ನಿವಾಸಗಳ ಮೇಲೆ ಎಸಿಬಿ ಪೆÇಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಏನಿದು ಕರ್ಮಕಾಂಡ:
ಮಹದೇವಪುರದ ಭಟ್ಟರಹಳ್ಳಿಯಲ್ಲಿ ರಸ್ತೆ ಅಗಲೀಕರಣ ವಿಚಾರದಲ್ಲಿ ಬಿಬಿಎಂಪಿಯಲ್ಲಿ ಸಹಾಯಕ ಅಭಿಯಂತರರಾಗಿದ್ದ ಕೃಷ್ಣಲಾಲ್ ಭಾರೀ ಗೋಲ್‍ಮಾಲ್ ನಡೆಸಿದ್ದರು.

ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ರಸ್ತೆ ಅಗಲೀಕರಣಕ್ಕೆ ವಶಪಡಿಸಿಕೊಳ್ಳಲಾದ ಸೈಟುಗಳು ಮತ್ತು ಬಿಲ್ಡಿಂಗ್‍ಗಳ ಜಾಗಕ್ಕಿಂತ ಹೆಚ್ಚು ಜಾಗಕ್ಕೆ ಬೆಲೆ ನಿಗದೀಕರಣ ಮಾಡಿದ್ದರು.

ಸಿಎಂಸಿ ಮತ್ತು ಬಿಬಿಎಂಪಿ ಅಭಿವೃದ್ಧಿಪಡಿಸಿದ ಅಡ್ಡರಸ್ತೆಗಳನ್ನು ಸಹ ಖಾಸಗಿ ವ್ಯಕ್ತಿಗಳ ಆಸ್ತಿ ಎಂದು ಬಿಂಬಿಸಿ ಆ ವ್ಯಕ್ತಿಗಳಿಗೆ ಟಿಡಿಆರ್ ನೀಡುವ ಮೂಲಕ ಕೋಟ್ಯಂತರ ರೂ. ವಂಚಿಸಿದ್ದ ಆರೋಪಕ್ಕೆ ಗುರಿಯಾಗಿದ್ದರು.

ಬಿಬಿಎಂಪಿಯಲ್ಲಿ ಕೋಟ್ಯಂತರ ರೂ. ಅಕ್ರಮ ವೆಸಗಿದ ನಂತರ ಎರವಲು ಸೇವೆ ಮೇಲೆ ಬಿಡಿಎಗೆ ವರ್ಗಾವಣೆಗೊಂಡಿದ್ದ ಕೃಷ್ಣಲಾಲ್ ಅಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಬಿಬಿಎಂಪಿಯಲ್ಲಿ ಕೃಷ್ಣಲಾಲ್ ನಡೆಸಿದ ಕೋಟ್ಯಂತರ ರೂ. ಹಗರಣ ಕುರಿತಂತೆ ದಾಖಲಾದ ಪ್ರಕರಣದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಎಸಿಬಿ ಪೆÇಲೀಸರು ದಿಢೀರ್ ದಾಳಿ ನಡೆಸಿದ್ದಾರೆ.

ಸಂಜಯನಗರದಲ್ಲಿರುವ ಕೃಷ್ಣಲಾಲ್ ಅವರ ನಿವಾಸ, ಬಿಬಿಎಂಪಿಯ ಮಹದೇವಪುರ ವಲಯದಲ್ಲಿರುವ ಸಹಾಯಕ ಅಭಿಯಂತರ ಕಚೇರಿ ಹಾಗೂ ಬಿಡಿಎನಲ್ಲಿರುವ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರ ಕಚೇರಿಗಳ ಮೇಲೂ ದಾಳಿ ನಡೆಸಲಾಗಿದೆ. ಇದೇ ರೀತಿ ದೀಪಕ್ ಕುಮಾರ್ ಮತ್ತು ಅಮಿತ್ ರಿಕಬ್ ಚಂದ್ ಜೈನ್ ಅವರ ಮನೆ ಹಾಗೂ ನಿವಾಸಗಳ ಮೇಲೂ ದಾಳಿ ನಡೆದಿದೆ.

60 ಕೋಟಿ ಗೋಲ್‍ಮಾಲ್: ಕೃಷ್ಣಲಾಲ್ ಅವರು ಬಿಬಿಎಂಪಿಯಲ್ಲಿ ಸಹಾಯಕ ಅಭಿಯಂತರರಾಗಿದ್ದ ವೇಳೆ ಮಹದೇವಪುರ ವಲಯದ ಭಟ್ಟರಹಳ್ಳಿಯಲ್ಲಿ 7 ಕಿ.ಮೀ ಉದ್ದದ ರಸ್ತೆ ಅಗಲೀಕರಣದ ವೇಳೆ 150 ಮೀಟರ್‍ನಷ್ಟು ಜಮೀನು ವಶಪಡಿಸಿಕೊಳ್ಳುವ ವಿಚಾರದಲ್ಲಿ ಸುಮಾರು 60 ಕೋಟಿ ರೂ.ಗಳಷ್ಟು ಅವ್ಯವಹಾರ ನಡೆಸಿದ್ದರು ಎಂದು ಎಸಿಬಿ ಐಜಿಪಿ ಚಂದ್ರಶೇಖರ್ ತಿಳಿಸಿದರು.

ವಶಕ್ಕೆ: ಬಿಡಿಎ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಕೃಷ್ಣಲಾಲ್ ಹಾಗೂ ಅವ್ಯವಹಾರದಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ ದೀಪಕ್‍ಕುಮಾರ್, ಅಮೀತ್ ರಿಕಬ್ ಚಂದ್ ಜೈನ್ ಅವರನ್ನು ವಶಕ್ಕೆ ಪಡೆದಿರುವ ಎಸಿಬಿ ಪೆÇಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಬಂಧನ ಸಾಧ್ಯತೆ: ಮೇಲ್ನೋಟಕ್ಕೆ ಕೃಷ್ಣಲಾಲ್ ಭಾರೀ ಅಕ್ರಮ ನಡೆಸಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಎಸಿಬಿ ಮೂಲಗಳು ಈ ಸಂಜೆಗೆ ಖಚಿತಪಡಿಸಿವೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ