ಟಿಡಿಆರ್ ಸಂಸ್ಥೆಯ ಮತ್ತೊಂದು ಕರ್ಮಕಾಂಡದ ತನಿಖೆ ಅವಕಾಶಕ್ಕೆ ಸರ್ಕಾರಕ್ಕೆ ಎಸಿಬಿ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 31- ಬಿಬಿಎಂಪಿ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ ಉಂಟು ಮಾಡಿರುವ ಟಿಡಿಆರ್ ಹಗರಣದ ಬೆನ್ನು ಬಿದ್ದಿರುವ ಎಸಿಬಿ ಪೊಲೀಸರು ಮಂತ್ರಿ ಸಂಸ್ಥೆಯವರು ಮಾಡಿರುವ ಮತ್ತೊಂದು ಕರ್ಮಕಾಂಡದ ತನಿಖೆಗೆ ಆದೇಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಮಲ್ಲೇಶ್ವರಂನಲ್ಲಿ ಮಂತ್ರಿ ಮಾಲ್ ನಿರ್ಮಿಸಿರುವ ಹಮಾರಾ ಶೆಲ್ಟರ್ ಸಂಸ್ಥೆಯವರು ಮಾಲ್ ಹಿಂಭಾಗದ ರೈಲ್ವೆ ಇಲಾಖೆಗೆ ಸೇರಿದ 1.96 ಲಕ್ಷ ಚದರಡಿ ಪ್ರದೇಶಕ್ಕೆ ಟಿಡಿಆರ್ ಪಡೆದು ಕೋಟ್ಯಂತರ ರೂ. ವಂಚಿಸಿದ್ದಾರೆ.

ಈ ಹಗರಣದಲ್ಲಿ ಬಿಬಿಎಂಪಿಯ ಹಲವಾರು ಅಧಿಕಾರಿಗಳು ಭಾಗಿಯಾಗಿರುವುದರಿಂದ ಕೂಲಂಕಷ ತನಿಖೆಗೆ ಅನುಮತಿ ನೀಡುವಂತೆ ಎಸಿಬಿ ಪೊಲೀಸರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.  ಮಂತ್ರಿ ಮಾಲ್ ಹಿಂಭಾಗದ ರೈಲ್ವೆ ಇಲಾಖೆಗೆ ಸೇರಿದ 1.96 ಲಕ್ಷ ಚದರಡಿ ಪ್ರದೇಶ ನಮಗೆ ಸೇರಿದ್ದು ಎಂದು ನಕಲಿ ದಾಖಲೆ ಸೃಷ್ಟಿಸಿ ಪಾಲಿಕೆಯಿಂದ ಟಿಡಿಆರ್ ಪಡೆದುಕೊಂಡಿದ್ದಾರೆ.

ಮಂತ್ರಿ ಮಾಲ್ ಸಂಸ್ಥೆಯವರು ಸಲ್ಲಿಸಿರುವ ಟಿಡಿಆರ್ ಪ್ರದೇಶ ರೈಲ್ವೆ ಇಲಾಖೆಗೆ ಸೇರಿದ್ದು ಎಂಬ ಬಗ್ಗೆ ತಿಳಿದಿದ್ದರೂ ಪಾಲಿಕೆ ಅಧಿಕಾರಿಗಳು ಭೂಗಳ್ಳರೊಂದಿಗೆ ಶಾಮೀಲಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಭ್ರಷ್ಟ ಅಧಿಕಾರಿಗಳು ಮತ್ತು ಭೂಗಳ್ಳರ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡುವಂತೆ ಎಸಿಬಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

ಈಗಾಗಲೇ ಗರುಡಾಚಾರ್ ಪಾಳ್ಯ ಸಮೀಪದ ಟಿಡಿಆರ್ ಹಗರಣವನ್ನು ಬಯಲು ಮಾಡಿ ಬಿಡಿಎ ಎಇಇ ಕೃಷ್ಣಾಲಾಲ್ ವಿರುದ್ಧ ಪ್ರಕರಣ ದಾಖಲಿಸಿರುವ ಎಸಿಬಿ ಪೊಲೀಸರು ಅದೇ ಮಾದರಿಯಲ್ಲಿ ನಗರದಾದ್ಯಂತ ನಡೆದಿರುವ ಟಿಡಿಆರ್ ಗೋಲ್‍ಮಾಲ್ ಪ್ರಕರಣಗಳನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.

ಇದೀಗ ಮಂತ್ರಿ ಮಾಲ್ ಸಂಸ್ಥೆಯ ಕರ್ಮಕಾಂಡವನ್ನು ಬಯಲಿಗೆಳೆಯಲು ಅನುಮತಿ ನೀಡುವಂತೆ ಎಸಿಬಿ ಪೊಲೀಸರು ಮಾಡಿಕೊಂಡಿರುವ ಮನವಿಗೆ ಅನುಮತಿ ಸಿಕ್ಕರೆ ಮತ್ತೊಂದು ಕರ್ಮಕಾಂಡ ಬಯಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

Facebook Comments

Sri Raghav

Admin