ಮದುವೆ ಮುಗಿಸಿ ಹಿಂದಿರುಗುತ್ತಿದ್ದಾಗ ಅಪಘಾತ : ಇಬ್ಬರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಹುಳಿಯಾರು, ಅ.21- ಬಸ್ ಏಜೆಂಟ್ ರಾಜಣ್ಣ ಎಂಬುವವರು ಮಗಳ ಮದುವೆ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಮಗ ಹಾಗೂ ಸಹೋದರಿ ಮಗನನ್ನು ಕಳೆದುಕೊಂಡಿದ್ದು, ಕುಟುಂಬದವರ ಆಕ್ರಂಧನ ಮುಗಿಲುಮುಟ್ಟಿತ್ತು. ಹುಳಿಯಾರಿನ ಬಸ್ ಏಜೆಂಟ್ ಕೋಳಿ ರಾಜಣ್ಣ ಎಂದೇ ಚಿರಪರಿಚಿತರು. ಇವರ ಮಗಳ ಮದುವೆ ನಿನ್ನೆ ಮೈಸೂರಿನಲ್ಲಿ ನೆರವೇರಿದ್ದು, ಮದುವೆ ಮುಗಿಸಿಕೊಂಡು ವಿವಿಧ ವಾಹನಗಳಲ್ಲಿ ಕುಟುಂಬಸ್ಥರು ವಾಪಸಾಗುತ್ತಿದ್ದರು.

ಒಂದು ಕಾರಿನಲ್ಲಿ ರಾಜಣ್ಣ ಅವರ ಮಗ ದರ್ಶನ್, ತಂಗಿಯ ಮಗ ಭರತ್ ಹಾಗೂ ಇನ್ನಿಬ್ಬರು ಬರುತ್ತಿದ್ದರು. ರಾಜಣ್ಣ ಮತ್ತು ಅವರ ಕುಟುಂಬದವರು ಬೇರೆ ವಾಹನದಲ್ಲಿ ಹಿಂದಿರುಗುತ್ತಿದ್ದರು. ಮಧ್ಯರಾತ್ರಿ 12 ಗಂಟೆ ಸುಮಾರಿನಲ್ಲಿ ಜೆಸಿ ಪುರ ಬಳಿಯ ತಿರುವಿನಲ್ಲಿ ಬರುತ್ತಿದ್ದಂತೆ ಕಾರು ನಿಯಂತ್ರಣ ತಪ್ಪಿ ಉರುಳಿ ಬಿದ್ದು ಅಪಘಾತಕ್ಕೀಡಾದ ಪರಿಣಾಮ ದರ್ಶನ್ ಹಾಗೂ ಭರತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಾರಿನಲ್ಲಿದ್ದ ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದು, ಇವರಿಬ್ಬರನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗಳ ಮದುವೆ ಸಂಭ್ರಮದಲ್ಲಿ ಇದೀಗ ಶೋಕ ಆವರಿಸಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments