ಅಪಘಾತಕ್ಕೀಡಾದವರನ್ನು ರಕ್ಷಿಸಲು ಹೋಗಿದ್ದ ಮೂವರ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಮದ್ದೂರು,ಜೂ.13-ಅಪಘಾತಕ್ಕೀಡಾದ ಕಾರಿನೊಳಗಿದ್ದ ಪ್ರಯಾಣಿಕರನ್ನು ರಕ್ಷಿಸಲು ಮುಂದಾದ ಮೂವರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ತಾಲ್ಲೂಕಿನ ಕೆ.ಎಂ.ದೊಡ್ಡಿ ವ್ಯಾಪ್ತಿಯ ಮಣಿಗೆರೆ ಗ್ರಾಮದ ದೇವರಾಜು(35), ಪ್ರಸನ್ನ(50) ಮತ್ತು ಪುಟ್ಟ (25) ಮೃತಪಟ್ಟ ದುರ್ದೈವಿಗಳಾಗಿದ್ದು, ಅದೇ ಗ್ರಾಮದ ಮಧು, ನಂದೀಶ ಸೇರಿದಂತೆ ಎಂಟು ಮಂದಿ ಗಾಯಗೊಂಡಿದ್ದಾರೆ.

ಬೆಂಗಳೂರಿನ ಹೊಸೂರು ಮೂಲದವರು ಶಿಫ್ಟ್ ಕಾರಿನಲ್ಲಿ ಮಳವಳ್ಳಿಗೆ ತೆರಳಿ ರಾತ್ರಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು. ರಾತ್ರಿ 9.45ರ ಸುಮಾರಿನಲ್ಲಿ ಮಣಿಗೆರೆ ಗ್ರಾಮದ ಬಳಿ ಈ ಕಾರು ನಿಯಂತ್ರಣ ತಪ್ಪಿ ರಸ್ತೆಬದಿಯ ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ಉರುಳಿಬಿದ್ದಿದೆ.

ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಮೂರು ತುಂಡಾಗಿ ಬಿದ್ದಿದೆ. ಅಪಘಾತ ಸಂಭವಿಸಿದ್ದನ್ನು ಗಮನಿಸಿದ ಗ್ರಾಮಸ್ಥರು ತರಾತುರಿಯಲ್ಲಿ ರಕ್ಷಿಸಲು ಮುಂದಾದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ವೈರ್ ಗಮನಿಸದೆ ತುಳಿದಿದ್ದರಿಂದ ಮೂವರು ಸ್ಥಳದಲ್ಲೇ ಮೃತಪಟ್ಟರೆ, 8 ಮಂದಿ ಗಾಯಗೊಂಡರು.  ಗಾಯಾಳುಗಳನ್ನು ಕೆ.ಎಂ.ದೊಡ್ಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತಕ್ಕೀಡಾಗಿ ಉರುಳಿಬಿದ್ದ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು, ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.  ಈ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಇಂದು ಬೆಳಗ್ಗೆ ಮದ್ದೂರು-ಕೊಳ್ಳೆಗಾಲ ಹೆದ್ದಾರಿ ತಡೆದು ಚೆಸ್ಕಾಂ ವಿರುದ್ಧ ಪ್ರತಿಭಟನೆ ನಡೆಸಿದರು.

ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದ ಮಾಹಿತಿ ಅರಿತ ಡಿವೈಎಸ್ಪಿ ಶೈಲೇಂದ್ರ, ಮದ್ದೂರು ಚೆಸ್ಕಾಂ ಉಪವಿಭಾಗದ ರಾಜೇಂದ್ರ ಸ್ಥಳಕ್ಕೆ ಧಾವಿಸಿ ಮೃತರ ಕುಟುಂಬದವರೊಂದಿಗೆ ಮಾತುಕತೆ ನಡೆಸಿ ಎರಡು ಲಕ್ಷ ರೂ. ಪರಿಹಾರ ನೀಡುವುದಾಗಿ ಹಾಗೂ ಗಾಯಾಳುಗಳಿಗೆ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಭರವಸೆ ನೀಡಿದರು.

ಇಷ್ಟಕ್ಕೆ ಸುಮ್ಮನಾಗದ ಕುಟುಂಬಸ್ಥರು ಚೆಸ್ಕಾಂನಲ್ಲಿ ಮೃತರ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದಾಗ ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ರಾಜೇಂದ್ರ ತಿಳಿಸಿದರು.  ಈ ಸಂಬಂಧ ಕೆ.ಎಂ.ದೊಡ್ಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments