ಕಾರು-ಕ್ರೂಸರ್ ನಡುವೆ ಭೀಕರ ಅಪಘಾತ : ಅರಸೀಕೆರೆಯ ನಾಲ್ವರು ಸಾವು, 7 ಮಂದಿ ಗಂಭೀರ

ಈ ಸುದ್ದಿಯನ್ನು ಶೇರ್ ಮಾಡಿ

ಚಿತ್ರದುರ್ಗ, ಸೆ.22-ಇಂದು ಬೆಳಗಿನ ಜಾವ ಕಾರು-ಕ್ರೂಸರ್ ವಾಹನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಅರಸೀಕೆರೆಯ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ, ಏಳು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ಕ್ರೂಸರ್‍ನಲ್ಲಿದ್ದ ಹಾಸನ ಜಿಲ್ಲೆ ಅರಸೀಕೆರೆ ಮೂಲದ ಲೋಕೇಶ್ ಮತ್ತು ಕಾರಿನಲ್ಲಿದ್ದ ಗೌತಮ್‍ಸಿಂಗ್, ಮದನ್‍ಸಿಂಗ್, ಮುಖೇಶ್‍ಸಿಂಗ್ ಎಂದು ಗುರುತಿಸಲಾಗಿದೆ. ಚಿತ್ರದುರ್ಗದಲ್ಲಿ ನಡೆದ ಶೋಭಾಯಾತ್ರೆ ಮುಗಿಸಿ ಇಂದು ಬೆಳಗಿನ ಜಾವ ಕ್ರೂಸರ್ ವಾಹನದಲ್ಲಿ ಹಿಂತಿರುಗುತ್ತಿದ್ದಾಗ ಹೊಸದುರ್ಗ ತಾಲೂಕಿನ ಕಲ್ಕೆರೆ ಗ್ರಾಮದ ಬಳಿ ಹೊಸದುರ್ಗ ಕಡೆಯಿಂದ ಬರುತ್ತಿದ್ದ ಕಾರಿಗೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಈ ಘೋರ ದುರಂತ ನಡೆದಿದೆ.

ಅಪಘಾತದಲ್ಲಿ ಗಾಯಗೊಂಡಿರುವ 7 ಮಂದಿಯನ್ನು ಹೊಸದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹಗಳನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments