ಗೌರಿಬಿದನೂರು ತಾಲೂಕು ಕಚೇರಿಗೆ ಆಕಸ್ಮಿಕ ಬೆಂಕಿ

ಈ ಸುದ್ದಿಯನ್ನು ಶೇರ್ ಮಾಡಿ

ಗೌರಿಬಿದನೂರು, ಜೂ.18- ನಗರದ ತಾಲೂಕು ಕಚೇರಿಯಲ್ಲಿನ ಅಭಿಲೇಖಾಲಯಕ್ಕೆ (ರೆಕಾರ್ಡ್ ರೂಂ) ಆಕಸ್ಮಿಕ ಬೆಂಕಿ ಬಿದ್ದು ಉಪಯೋಗಕ್ಕೆ ಬಾರದ ಪೇಪರ್‍ಗಳು ಸುಟ್ಟು ಬೂದಿಯಾಗಿವೆ. ಸಮಯಕ್ಕೆ ಸರಿಯಾಗಿ ಅಗ್ನಿ ಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದ್ದರಿಂದ ದಾಖಲೆಗಳನ್ನು ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿದಂತಾಗಿದೆ.

ನಿನ್ನೆ ಬೆಳಗಿನ ಜಾವ 4 ಗಂಟೆಯಲ್ಲಿ ತಾಲೂಕು ಕಚೇರಿಯ ಆವರಣದ ಕೊಠಡಿಯೊಂದರಲ್ಲಿ ಹೊಗೆ ಬರುತ್ತಿದ್ದನ್ನು ಕಂಡು ಸಿಬ್ಬಂದಿ ಅಗ್ನಿ ಶಾಮಕ ದಳದವರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಅಭಿಲೇಖಾಲಯದಲ್ಲಿನ ಕಡತಗಳನ್ನು ರಕ್ಷಿಸಿದ್ದಾರೆ.

ಯಾರೋ ಕಿಡಿಗೇಡಿಗಳು ಬೀಡಿ ಅಥವಾ ಸಿಗರೇಟ್ ಅಭಿಲೇಖಾಲಯದ ಕಿಟಿಕಿಯಲ್ಲಿ ಹಾಕಿರಬಹುದು, ಇದರಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಯಾವುದೇ ದಾಖಲೆಗಳು ಬೆಂಕಿಗೆ ಸಿಲುಕಿಲ್ಲ ಎಂದು ತಹಸೀಲ್ದಾರ್ ಹೆಚ್.ಶ್ರೀನಿವಾಸ್ ಸ್ಪಷ್ಟಪಡಿಸಿದ್ದಾರೆ.

Facebook Comments