ಆ್ಯಸಿಡ್ ದಾಳಿ ಪ್ರಕರಣ : ಬಾಮೈದ ಮತ್ತು ಸ್ನೇಹಿತನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.21- ಅಂತರ ಕಾಯ್ದುಕೊಂಡಿದ್ದ ಅತ್ತಿಗೆ ಮೇಲೆ ಆ್ಯಸಿಡ್ ದಾಳಿ ಮಾಡಿದ್ದ ಬಾಮೈದ ಮತ್ತು ಈತನ ಸ್ನೇಹಿತನನ್ನು ಉತ್ತರ ವಿಭಾಗದ ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗಾಯತ್ರಿನಗರದ ಅರುಣ್ ನಾಯಕ್ (38) ಮತ್ತು ನಾಗಸಂದ್ರದ ಕುಮಾರ್ ನಾಯಕ್ (30) ಬಂಧಿತರು. ಅರುಣ್ ನಾಯಕ್ ಬಿಎಂಟಿಸಿಯಲ್ಲಿ ಚಾಲಕ ಮತ್ತು ನಿರ್ವಾಹಕರಾಗಿದ್ದು, ಇಂದಿರಾಬಾಯಿ ಅವರು ಮತ್ತು ಈತ ಸಂಬಂಧಿಯಾಗಿದ್ದು, ಆತ್ಮೀಯತೆಯಿಂದ ಇದ್ದರು.

ಇತ್ತೀಚೆಗೆ ಇಂದಿರಾಬಾಯಿ ಅವರು ಅರುಣ್ ನಾಯಕ್‍ನೊಂದಿಗೆ ಅಂತರ ಕಾಯ್ದುಕೊಂಡಿದ್ದರು. ಇದರಿಂದ ಅರುಣ್ ನಾಯಕ್ ಕೋಪಗೊಂಡಿದ್ದನು. ಡಿ.19ರಂದು ಬೆಳಗಿನ ಜಾವ 5.30ರ ಸುಮಾರಿನಲ್ಲಿ ಬಿಎಂಟಿಸಿ ಬಸ್ ನಿರ್ವಾಹಕರಾಗಿರುವ ಇಂದಿರಾಬಾಯಿ ಅವರು ಕೆಲಸಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ತನ್ನ ಸ್ನೇಹಿತ ಕುಮಾರ್ ನಾಯಕ್‍ನೊಂದಿಗೆ ಬೈಕ್‍ನಲ್ಲಿ ಹಿಂಬಾಲಿಸಿಕೊಂಡು ಬಂದ ಅರುಣ್ ನಾಯಕ್ ಇಂದಿರಾ ಅವರ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದನು. ಘಟನೆಯಲ್ಲಿ ಇಂದಿರಾ ಅವರ ಮುಖ,

ಕುತ್ತಿಗೆ ಕೈ ಹಾಗೂ ಇನ್ನಿತರ ಕಡೆಗಳಲ್ಲಿ ಸುಟ್ಟ ಗಾಯಗಳಾಗಿದ್ದು, ಇವರಿಬ್ಬರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಕೈಗೊಂಡ ಇನ್ಸ್‍ಪೆಕ್ಟರ್ ವೆಂಕಟೇಗೌಡ ಮತ್ತು ಸಿಬ್ಬಂದಿಗಳ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Facebook Comments