‘ಅದ್ದೂರಿ’ ಮದುವೆ : ಪ್ರೇರಣಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಬಹದ್ದೂರ್’ ಗಂಡು
ಬೆಂಗಳೂರು, ನ.24- ನಟ ಧೃವಸರ್ಜಾ ಇಂದು ತನ್ನ ಬಾಲ್ಯದ ಗೆಳತಿ ಪ್ರೇರಣಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಮೂರು ದಿನಗಳಿಂದಲೂ ಧೃವ ಹಾಗೂ ಪ್ರೇರಣಾ ಅವರ ಮನೆಯಲ್ಲಿ ಮದುವೆ ಶಾಸ್ತ್ರ ನಡೆಯುತ್ತಿದ್ದು, ಇಂದು ಅದ್ಧೂರಿಯಾಗಿ ಧೃವ ಮತ್ತು ಪ್ರೇರಣಾ ಹಿಂದೂ ಸಂಪ್ರದಾಯದಂತೆ ಹೊಸ ಜೀವನಕ್ಕೆ ಕಾಲಿರಿಸಿದರು.
ನಿನ್ನೆ ದೇವತಾ ಕಾರ್ಯ ನಡೆದಿದ್ದು, ಇಂದು ಜೆಪಿ ನಗರದಲ್ಲಿರುವ ಸಂಸ್ಕøತಿ ಬೃಂದಾವನ ಕನ್ವೆನ್ಷನ್ ಹಾಲ್ನಲ್ಲಿ ಬೆಳಗ್ಗೆ 7.15ರ ಶುಭ ಲಗ್ನದಲ್ಲಿ ಮುಹೂರ್ತ ನೆರವೇರಿದೆ.ಧಾರಾ ಮುಹೂರ್ತಕ್ಕೆ ಕುಟುಂಬಸ್ಥರು ಸೇರಿದಂತೆ ಗಣ್ಯರು, ಸ್ನೇಹಿತರು ಆಗಮಿಸಿ ನವ ವಧು-ವರರಿಗೆ ಶುಭಾಶಯ ಕೋರಿದ್ದಾರೆ.
ಇಂದು ಸಂಜೆ 7 ಗಂಟೆಗೆ ಆರತಕ್ಷತೆ ನಡೆಯಲಿದ್ದು, ಕನ್ನಡ, ತಮಿಳು, ತೆಲುಗು ಚಿತ್ರರಂಗದ ಗಣ್ಯರು, ನಿರ್ದೇಶಕರು, ನಿರ್ಮಾಪಕರು, ನಟ-ನಟಿಯರು ಆಗಮಿಸಲಿದ್ದಾರೆ. ನಟ ಧೃವ ಹಾಗೂ ಪ್ರೇರಣಾ ಶ್ವೇತವರ್ಣದ ಧಿರಿಸಿನಲ್ಲಿ ಕಂಗೊಳಿಸಿದರು. ಹಲವು ಬಗೆಯ ಹೂವುಗಳಿಂದ ಮದುವೆ ಮಂಟಪವನ್ನು ಸಿಂಗರಿಸಿ ಹಸಿರು ತಳಿರು-ತೋರಣಗಳಿಂದ ಅಲಂಕಾರ ಮಾಡಲಾಗಿತ್ತು.
ಅಭಿಮಾನಿಗಳಿಗಾಗಿ ನಾಳೆ ಭರ್ಜರಿಯಾಗಿ ಔತಣಕೂಟ ಏರ್ಪಡಿಸಲಾಗಿದೆ. ಇಂದು ನಡೆದ ವಿವಾಹ ಸಂದರ್ಭದಲ್ಲಿ ನಟ ಅರ್ಜುನ್ ಸರ್ಜಾ, ಸಹೋದರ ಚಿರಂಜೀವಿ ಸರ್ಜಾ, ಮೇಘನಾ ರಾಜ್, ಪುನಿತ್ ರಾಜ್ಕುಮಾರ್, ಅಶ್ವಿನಿ ಪುನಿತ್ ರಾಜ್ಕುಮಾರ್, ಪ್ರಮೀಳಾ ಜೋಷಾಯ್, ಸುಂದರ್ರಾಜ್ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು ನೆರೆದಿದ್ದರು.