Friday, April 19, 2024
Homeರಾಜ್ಯಸುಮಲತಾ ಅವರ ನಿರ್ಧಾರಕ್ಕೆ ಬೆಂಬಲವಾಗಿ ನಿಂತ ನಟ ದರ್ಶನ್

ಸುಮಲತಾ ಅವರ ನಿರ್ಧಾರಕ್ಕೆ ಬೆಂಬಲವಾಗಿ ನಿಂತ ನಟ ದರ್ಶನ್

ಮಂಡ್ಯ, ಏ.3- ತೀವ್ರ ಕುತೂಹಲ ಕೆರಳಿಸಿದ್ದ ಮಂಡ್ಯ ರಾಜಕಾರಣದಲ್ಲಿ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ತಮ್ಮ ರಾಜಕೀಯ ನಿರ್ಧಾರ ಪ್ರಕಟಿಸುವ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಸುಮಲತಾರ ಪುತ್ರ ಅಭಿಷೇಕ್ ಅಂಬರೀಶ್ ಬೆನ್ನಿಗೆ ನಿಂತು ಬೆಂಬಲ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದರ್ಶನ್, ಐದು ವರ್ಷದ ಹಿಂದೆ ಪ್ರಚಾರಕ್ಕೆ ಬಂದ ಕಡೆಯಲೆಲ್ಲಾ ಬಿಸಿಲಿನಲ್ಲಿ ಎಳೆನೀರು ಕೊಟ್ಟು ತಂಪೆರೆದಿದ್ದ ರೈತರು ಹಾಗೂ ಪ್ರತಿ ಹಳ್ಳಿಯಲ್ಲೂ ಆರತಿ ಎತ್ತಿ ಆಶೀರ್ವದಿಸಿದ ಮಹಿಳೆಯರಿಗೆ ಕೃತಜ್ಞತೆಗಳು.ಆ ಬಂದು ಯಮ ಕರೆದರೂ ಇರಪ್ಪ ನಮ್ಮ ಅಮ್ಮನ ಒಂದು ಕೆಲಸ ಇದೆ ಮುಗಿಸಿ ಕೊಂಡು ಬರುತ್ತೇನೆ ಎಂದೇ ಹೇಳುತ್ತೇನೆ. ಏಕೆಂದರೆ ನನಗೂ ಆ ಮನೆಗೂ ಅಂತಹ ಬಾಂಧವ್ಯ ಇದೆ ಎಂದರು.

ಕಳೆದ ಬಾರಿ ಬಲಗೈ ಮುರಿದಿತ್ತು. ಈ ಬಾರಿ ಎಡಗೈಗೆ ಹಾನಿಯಾಗಿದೆ. ನಿನ್ನೆ ಆಪರೇಷನ್ ಇತ್ತು. ಆದರೆ ಇಂದು ಅಮ್ಮನ ಜೊತೆ ಇರಬೇಕಾಗಿದ್ದರಿಂದ ಅದನ್ನು ಮುಂದೂಡಿದ್ದೇನೆ. ಸಂಜೆ ಹೋಗಿ ಆಸ್ಪತ್ರೆಗೆ ದಾಖಲಾಗುತ್ತೇನೆ. ನಾಳೆ ಬೆಳಗ್ಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತ್ತೇನೆ ಎಂದರು.

ನಾನು ಇಲ್ಲಿಂದ ಹೋಗುವಾಗ ದಯವಿಟ್ಟು ಜಾಗ ಮಾಡಿಕೊಡಿ, ಯಾರು ಕೈ ಎಳೆಯಬೇಡಿ ಎಂದು ಮನವಿ ಮಾಡಿಕೊಂಡ ದರ್ಶನ್, ಐದು ಸುಮಲತಾ ಅವರು ಪಕ್ಷೇತರರಾಗಿ ಮಾಡಿರುವ ಸಾಧನೆ ದೊಡ್ಡದು. ನಾನು ರಾಜಕೀಯ ಮಾತನಾಡಲ್ಲ, ಆದರೆ ಅಮ್ಮ ಏನೇ ನಿರ್ಧಾರ ತೆಗೆದುಕೊಂಡರು ನಾವು ಜೊತೆಯಲ್ಲಿರುತ್ತೇವೆ. ಅದು ಯಾವುದೇ ರೀತಿಯ ನಿರ್ಧಾರವಾಗಿದ್ದರೂ ಜೊತೆಯಲ್ಲಿರುತ್ತೇವೆ. ಮನೆಯ ಮಕ್ಕಳು ಎಂದ ಮೇಲೆ ಮನೆ ಮಕ್ಕಳ ರೀತಿಯಲ್ಲೇ ಇರಬೇಕು.

ಇವತ್ತು ತಾಯಿ ಎಂದು ನಾಳೆ ಇಲ್ಲಪ್ಪ ಅವರಿಗೂ ನನಗೂ ಏನು ಸಂಬಂಧ ಇಲ್ಲ ಎನ್ನಲ್ಲ. ಸಾಯುವವರೆಗೂ ತಾಯಿ ತಾಯಿನೇ. ಅವರು ಏನೇ ಹೇಳಿದರೂ ಅದನ್ನು ನಾನು ನನ್ನ ತಮ್ಮ ಪಾಲಿಸುತ್ತೇವೆ. ಕಣ್ಣು ಮುಚ್ಚಿಕೊಂಡು ಆಳು ಬಾವಿಗೆ ಬೀಳಲು ಎಂದರೆ ಅದಕ್ಕೂ ರೆಡಿ ನಾವು. ಆ ಮನೆಗೂ ನಮಗೂ ಅಷ್ಟು ಭಾಂದವ್ಯ ಇದೆ ಎಂದರು.

ಅಭಿಷೇಕ್ ಅಂಬರೀಶ್ ಮಾತನಾಡಿ, ಕಳೆದ ಐದು ವರ್ಷಗಳ ಹಿಂದೆ ಇಲ್ಲಿಂದಲೇ ಸ್ವಾಭಿಮಾನಿ ಹೋರಾಟ ಆರಂಭಿಸಲಾಯಿತು. ಏನೇ ಆಗಲಿ, ಸರ್ಕಾರ ಬರುತ್ತೆ ಹೋಗುತ್ತೆ, ಚುನಾವಣೆ ಬರುತ್ತೆ ಹೋಗುತ್ತೆ, ನಮ್ಮ ನಿಮ್ಮ ನಡುವಿನ ಸಂಬಂಧವನ್ನು ಯಾರು ಮರೆಯಲಾಗುವುದಿಲ್ಲ. ಪರಿಸ್ಥಿತಿ ಹೇಗೆ ಹೋಗಲಿ ಯಾರು ಬದಲಾಯಿಸಲಾಗಲ್ಲ. ದೇವರ ಮುಂದೆ ಪ್ರಮಾಣ ಮಾಡಿ ಹೇಳುತ್ತೇನೆ. ಮಂಡ್ಯ ಬಿಟ್ಟು ನಾವು ಹೋಗಲ್ಲ. ನಿಮ್ಮ ಋಣ ತೀರಿಸಲು ಜೀವನ ಪೂರ್ತಿ ಶ್ರಮಿಸುತ್ತೇವೆ. ನಾವು ಎಲ್ಲಿಯೂ ಹೋಗಲ್ಲ. ನಿಮ್ಮ ನಡುವೆಯೇ ಇರುತ್ತೇವೆ ಎಂದರು.

ಐದು ವರ್ಷ ಹಲವಾರು ಕಷ್ಟಗಳಿತ್ತು. ನಮ್ಮ ತಾಯಿ ಮಂಡ್ಯ ಜನರಿಗಾಗಿ ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಏನೇ ಆಗಲಿ, ಮಂಡ್ಯ ಎಂದರೆ ಅಂಬರೀಶ್ ಅಣ್ಣ, ಅಂಬರೀಶ್ ಅಣ್ಣ ಎಂದರೆ ಮಂಡ್ಯ ಎಂಬಂತಾಗಿದೆ ಎಂದರು.

ಸದಾ ಗತ್ತಿನಲ್ಲಿ ಮಾತನಾಡುತ್ತಿದ್ದ ಅಭಿಷೇಕ್, ಇಂದು ವಿನಯದಿಂದ ವರ್ತಿಸಿದ್ದು ಕಂಡು ಬಂತು. ಮುಂದೆ ಇರುವವರು ಪಕ್ಕಕ್ಕೆ ಸರಿದು ಹಿಂದೆ ಇರುವವರಿಗೆ ಜಾಗ ಮಾಡಿಕೊಡಿ ಅಣ್ಣಾ, ಕೊನೆಯವರೆಗೂ ನನ್ನ ಧ್ವನಿ ಕೇಳಿಸುತ್ತಿದೆಯೇ ಎಂದು ಸೌಜನ್ಯಪೂರ್ವಕವಾಗಿ ಕೇಳಿ ಗಮನ ಸೆಳೆದರು.

ಇದೇ ವೇಳೆ ಸುಮಲತಾ ಅವರ ಸಾಧನೆಯ ಕೈಪಿಡಿಯನ್ನು ಬಿಡುಗಡೆ ಮಾಡಿದರು. ಮಂಡ್ಯದ ಜನರಿಗಾಗಿ ಮಿಡಿಯುತ್ತಿದೆ ಸ್ವಾಭಿಮಾನಿಯ ಉಸಿರು ಎಂಬ ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು. ಆರಂಭದಲ್ಲಿ ಕಾಳಿಕಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

RELATED ARTICLES

Latest News