ಎರಡನೇ ಸುತ್ತಿನ ವಿಚಾರಣೆಗೆ ಸಿಸಿಬಿ ಮುಂದೆ ದಿಗಂತ್ ಹಾಜರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.23- ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ನಟ ದಿಗಂತ್ ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕೇಂದ್ರ ಕಚೇರಿಯಲ್ಲಿ ದಿಗಂತ್ ಅವರ ಎರಡನೇ ಸುತ್ತಿನ ವಿಚಾರಣೆ ನಡೆಯಿತು.

ಇಂದು ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿಗಳು ಅವರಿಗೆ ಎರಡನೇ ನೋಟಿಸ್ ನೀಡಿದ್ದರು. ಹಾಗಾಗಿ ಅವರು ಇಂದು ವಿಚಾರಣೆಗೆ ಹಾಜರಾಗಿದ್ದಾರೆ. ಕಳೆದ ಸೆ.16 ರಂದು ನಟ ದಿಗಂತ್ ಮತ್ತು ಪತ್ನಿ ಐಂದ್ರಿತಾ ರೇ ವಿಚಾರಣೆಗೆ ಹಾಜರಾಗಿದ್ದರು.

ಆ ಸಂದರ್ಭದಲ್ಲಿ ದಿಗಂತ್ ಅವರ ಮೊಬೈಲನ್ನು ವಶಕ್ಕೆ ಪಡೆದಿದ್ದ ತನಿಖಾಧಿಕಾರಿಗಳು ಅದನ್ನು ಎಫ್‍ಎಸ್‍ಎಲ್‍ಗೆ ಕಳುಹಿಸಿದ್ದರು. ಇದೀಗ ಅವರ ಮೊಬೈಲ್ ರಿಟ್ರೈವ್ ಆಗಿದೆ. ಅದರಲ್ಲಿ ದೊರೆತ ಮಾಹಿತಿ ಹಾಗೂ ಮೊದಲ ಬಾರಿಗೆ ಹಾಜರಾಗಿದ್ದ ವೇಳೆ ನೀಡಿದ್ದ ಹೇಳಿಕೆಗಳ ಬಗ್ಗೆ ಮತ್ತೊಮ್ಮೆ ತನಿಖಾ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಇತ್ತೀಚೆಗೆ ತನಿಖೆಗೆ ಹಾಜರಾಗಿದ್ದ ಮೂವರಿಂದ ಹಲವು ಮಾಹಿತಿಗಳು ತನಿಖಾಧಿಕಾರಿಗಳಿಗೆ ಲಭ್ಯವಾಗಿದ್ದವು. ಆ ಬಗ್ಗೆಯೂ ದಿಗಂತ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ.

ಮುಂಬೈ, ಗೋವಾ, ಶ್ರೀಲಂಕಾ ಮತ್ತು ಬೆಂಗಳೂರು ಸೇರಿದಂತೆ ಮತ್ತಿತರರ ಕಡೆ ಆಯೋಜಿಸಿದ್ದ ಪಾರ್ಟಿಗಳಿಗೆ ಹೋಗಿರುವುದರ ಬಗ್ಗೆ ಮತ್ತು ಬಂಧಿತರಾಗಿರುವ ಡ್ರಗ್ ಪೆಡ್ಲರ್‍ಗಳು, ಪಾರ್ಟಿ ಆಯೋಜಕರು ವಿಚಾರಣೆ ಸಂದರ್ಭದಲ್ಲಿ ನೀಡಿರುವ ಹೇಳಿಕೆಗಳು ದಿಗಂತ್‍ಗೆ ಮುಳುವಾಗುವ ಸಾಧ್ಯತೆಗಳಿವೆ.

Facebook Comments