1650 ಅರಣ್ಯವನ್ನೇ ದತ್ತು ಪಡೆದ ಡಾರ್ಲಿಂಗ್ ಪ್ರಭಾಸ್

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್, ಸೆ.7- ನಟ ಪ್ರಭಾಸ್ ಅರಣ್ಯ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ದತ್ತು ಪಡೆಯುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿಯಾಗಿದ್ದಾರೆ. ತೆಲುಗು, ತಮಿಳಿನಲ್ಲಿ ಬ್ಯೂಸಿ ನಟರಾಗಿದ್ದು, ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ಪ್ರಭಾಸ್ ಹೈದರಾಬಾದ್ ಸಮೀಪದಲ್ಲಿ 1650 ಎಕರೆ ಕಾಜಿಪಲ್ಲಿ ಸಂರಕ್ಷಿತ ಅರಣ್ಯ ಪ್ರದೇಶವನ್ನು ದತ್ತು ಪಡೆದಿದ್ದಾರೆ.

ಆ ಪ್ರದೇಶದಲ್ಲಿ ನೀರಿನ ಹೊಂಡ, ಪ್ರಾಣಿ ಸಂಕುಲದ ಆಹಾರ ಉತ್ಪಾದನೆ ಸೇರಿದಂತೆ ಇತರ ಅಭಿವೃದ್ಧಿ ಕೆಲಸಗಳಿಗೆ ಮೊದಲ ಹಂತದಲ್ಲಿ 2 ಕೋಟಿ ರೂಪಾಯಿಗಳನ್ನು ನೀಡಿದ್ದಾರೆ.

ತೆಲಂಗಾಣ ಸರ್ಕಾರ ಮತ್ತು ರಾಜ್ಯ ಸಭಾ ಸದಸ್ಯ ಸಂತೋಷ್ ಕುಮಾರ್ ಅವರ ಸಹಕಾರದಿಂದ ನನಗೆ ಈ ಕೆಲಸ ಮಾಡಲು ಸಾಧ್ಯವಾಗುತ್ತಿದೆ. ನಗರ ಪ್ರದೇಶಗಳ ಪರಿಸರವನ್ನು ಸಹನೀಯವಾಗಿಸಬೇಕು. ಅದಕ್ಕಾಗಿ ಮತ್ತಷ್ಟು ಅರಣ್ಯ ಅಭಿವೃದ್ಧಿಯಾಗಬೇಕು ಎಂದು ಪ್ರಭಾಸ್ ಹೇಳಿದ್ದಾರೆ.

ಸ್ವತಃ ಪರಿಸರ ಪ್ರೇಮಿಯಾಗಿರುವ ಬಾಹುಬಲಿ ಖ್ಯಾತಿಯ ಪ್ರಭಾಸ್ ಅವರ ಈ ಕಾರ್ಯ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಸಾಮಾನ್ಯವಾಗಿ ಶ್ರೀಮಂತರು, ನಟನಟಿಯರು, ಪ್ರಭಾವಿಗಳು ಮತ್ತು ಆಸಕ್ತರು ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಸಾಕಲಾಗಿರುವ ವನ್ಯ ಜೀವಿಗಳನ್ನು ದತ್ತು ತೆಗೆದುಕೊಳ್ಳುತ್ತಾರೆ. ಆ ಪ್ರಾಣಿಗಳ ನಿರ್ವಹಣೆಗೆ ಒಂದಿಷ್ಟು ಹಣಕಾಸಿನ ಸಹಾಯ ಮಾಡುತ್ತಾರೆ.

ಆದರೆ ಪ್ರಭಾಸ್ ಒಂದು ಹೆಜ್ಜೆ ಮುಂದೆ ಹೋಗಿ ಅರಣ್ಯ ಪ್ರದೇಶದ ಅಭಿವೃದ್ಧಿಯನ್ನೇ ದತ್ತು ಪಡೆದಿರುವುದು ಹೊಸ ಸಂಪ್ರದಾಯವಾಗಿದೆ. ನಿಜವಾದ ಬದ್ಧತೆ ಹಾಗೂ ಸಾಮಾಜಿಕ ಕಳಕಳಿ ಇರುವವರು ಮುಂದೆ ಬಂದು ಅರಣ್ಯ ಪ್ರದೇಶ ಅಭಿವೃದ್ಧಿಗೆ ಕ್ರಮ ಕೈಗೊಂಡರೆ ಸರ್ಕಾರದ ಮೇಲಿರುವ ಒತ್ತಡವೂ ಕಡಿಮೆಯಾಗಲಿದೆ. ಭ್ರಷ್ಟಚಾರ ಕಡಿಮೆಯಾಗಿ ಅರಣ್ಯದ ನಿಜವಾದ ಅಭಿವೃದ್ಧಿಯಾಗುವ ಸಾಧ್ಯತೆಗಳಿವೆ.

Facebook Comments