ನಟಿ ಪ್ರಿಯಾಮಣಿ ಮದುವೆ ಅಸಿಂಧು..?!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.22- ಬಹುಭಾಷೆಗಳಲ್ಲಿ ನಟಿಸಿ ಖ್ಯಾತರಾಗಿರುವ ಕನ್ನಡತಿ ಪ್ರಿಯಾಮಣಿ ಅವರ ವೈವಾಹಿಕ ಜೀವನ ವಿವಾದಕ್ಕೆ ಸಿಲುಕಿದೆ. ಪ್ರಿಯಾಮಣಿ ಅವರು ಮದುವೆಯಾಗಿರುವ ಮುಸ್ತಫರಾಜ್ ಅವರ ಮೊದಲ ಪತ್ನಿ ಆಯಿಷಾ ಅವರು ಪ್ರಿಯಾಮಣಿ ಮತ್ತು ಮುಸ್ತಫ ಅವರ ವಿವಾಹ ಅಸಿಂಧು ಎಂದು ಪ್ರತಿಪಾದಿಸಿದ್ದಾರೆ. ಮುಸ್ತಫ ಅವರು ನನಗೆ ವಿಚ್ಛೇದನ ನೀಡಿಲ್ಲ.

ನಮ್ಮಿಬ್ಬರ ವೈವಾಹಿಕ ಜೀವನದ ಅಂತ್ಯದ ಬಗ್ಗೆ ಕನಿಷ್ಠ ನ್ಯಾಯಾಲಯದಲ್ಲಿ ಅರ್ಜಿ ಕೂಡ ಹಾಕಿಲ್ಲ. ಈ ನಡುವೆ ಪ್ರಿಯಾಮಣಿ ಮದುವೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಮುಸ್ತಫರಾಜ್ ತಳ್ಳಿ ಹಾಕಿದ್ದಾರೆ.

ನಾನು ಕಾಲಕಾಲಕ್ಕೆ ನನ್ನ ಇಬ್ಬರು ಮಕ್ಕಳು ಹಾಗೂ ಮೊದಲ ಪತ್ನಿ ಆಯಿಷಾ ಅವರ ಜೀವನ ನಿರ್ವಹಣೆಗೆ ಹಣ ನೀಡುತ್ತಿದ್ದೇನೆ. ಆಕೆ ನನ್ನಿಂದ ಮತ್ತಷ್ಟು ಹಣ ಕೇಳುವ ಪ್ರಯತ್ನ ನಡೆಸಿದ್ದಾರೆ. ಅದಕ್ಕಾಗಿ ಇಷ್ಟು ದಿನ ಸುಮ್ಮನಿದ್ದು, ಈಗ ಆರೋಪ ಮಾಡುತ್ತಿದ್ದಾಳೆ ಎಂದು ಉತ್ತರಿಸಿದ್ದಾರೆ. 2010ರಲ್ಲೇ ನಾನು ಮತ್ತು ಆಯಿಷಾ ಬೇರೆಯಾದವು. 2013ರಲ್ಲಿ ನಮಗೆ ವಿಚ್ಛೇದನವಾಗಿದೆ. 2017ರಲ್ಲಿ ನಾನು ಪ್ರಿಯಾಮಣಿ ಅವರನ್ನು ವಿವಾಹವಾಗಿದ್ದೇನೆ ಎಂದು ವಿವರಿಸಿದ್ದಾರೆ.

ಇದಕ್ಕೆ ಪ್ರತ್ಯುತ್ತರಿಸಿರುವ ಆಯಿಷಾ ವಿಳಂಬಕ್ಕೆ ಪ್ರಮುಖ ಕಾರಣವೆಂದರೆ ವಿವಾದವನ್ನು ಸೌಹಾರ್ದತಯುತವಾಗಿ ಬಗೆಹರಿಸಿಕೊಳ್ಳುವುದಾಗಿತ್ತು. ಎರಡು ಮಕ್ಕಳ ತಾಯಿ ಆಗಿರುವ ನನ್ನ ಮುಂದೆ ಬೇರೆ ಯಾವ ಆಯ್ಕೆಗಳಿರಲಿಲ್ಲ ಎಂದು ಹೇಳಿದ್ದಾರೆ. ನಮಗಿನ್ನೂ ವಿಚ್ಛೇದನವಾಗಿಲ್ಲ. ಹಾಗಾಗಿ ಮುಸ್ತಫರಾಜ್ ಈಗಲೂ ನನ್ನ ಪತಿ. ಪ್ರಿಯಾಮಣಿ ಅವರೊಂದಿಗಿನ ವಿವಾಹ ಅಸಿಂಧು ಎಂದು ಆಯಿಷಾ ಹೇಳುವ ಮೂಲಕ ಪ್ರಿಯಾಮಣಿ ಅವರ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ.

ಪ್ರಿಯಾಮಣಿ ಕನ್ನಡ, ತೆಲುಗು, ಮಲೆಯಾಳಂ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಒಟಿಟಿಯಲ್ಲಿ ಪ್ರಸಾರವಾದ ಫ್ಯಾಮಿಲಿಮ್ಯಾನ್-2 ಸರಣಿಯಲ್ಲಿ ನಟಿಸುವ ಮೂಲಕ ಪ್ರಿಯಾಮಣಿ ಹೆಚ್ಚು ಜನಪ್ರಿಯರಾದರು. ಮುಂದಿನ ಅವರ ಚಿತ್ರಗಳು ಕೂಡ ಭಾರೀ ನಿರೀಕ್ಷೆ ಮೂಡಿಸಿವೆ. ಈ ನಡುವೆ ಅವರ ವೈವಾಹಿಕ ಜೀವನ ಚರ್ಚೆಗೆ ಗ್ರಾಸವಾಗಿದೆ.

Facebook Comments