ಮನೋವಿಕಾಸ ಮತ್ತು ಆತ್ಮೋನ್ನತಿಗಾಗಿ ಕಲೆ ಅಗತ್ಯ : ನಟ ಶ್ರೀಧರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ತಂಗಡಿ, ಫೆ.14- ಕಲೆಯಿಂದ ಮನಸ್ಸು ಅರಳುತ್ತದೆ, ಬುದ್ಧಿ ಬೆಳೆಯುತ್ತದೆ. ಮನೋವಿಕಾಸ, ಆತ್ಮೋನ್ನತಿ ಮತ್ತು ಮನೋರಂಜನೆಗಾಗಿ ಕಲೆ ಅಗತ್ಯ. ನಾಟ್ಯಶಾಸ್ತ್ರ ಎಲ್ಲಾ ಕಲೆಗಳಿಗೂ ಮಾತೃಸ್ಥಾನದಲ್ಲಿದೆ ಎಂದು ಖ್ಯಾತ ಚಲನಚಿತ್ರ ನಟ ಡಾ. ಶ್ರೀಧರ್ ಹೇಳಿದರು.ಧರ್ಮಸ್ಥಳದಲ್ಲಿ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ 18ನೇ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆಯ ವಿಜೇತರಿಗೆ ಪುರಸ್ಕಾರ ನೀಡಿ ಮಾತನಾಡಿದ ಅವರು, ತಾನು ಆರಂಭದಲ್ಲಿ ಚಿತ್ರಕಲಾವಿದನಾಗಿ ನಂತರ ಸಂಗೀತ ಮತ್ತು ನೃತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದೆ ಎಂದರು.

ಚಿತ್ರಕಲೆಯಲ್ಲಿ ಭಾವ, ಸೌಂದರ್ಯ ಮತ್ತು ತಂತ್ರಗಾರಿಕೆ ಅಡಕವಾಗಿದೆ. ಚಿತ್ರಕಲೆಗೆ ವಸ್ತುವಿನ ಆಯ್ಕೆ ಮುಖ್ಯವಾಗಿದೆ. ಮನಸ್ಸಿನ ಕಲ್ಪನೆಗಳಿಗೆ ಪ್ರಜ್ಞೆಯನ್ನು ಸೇರಿಸಿದಾಗ ಆಕರ್ಷಕ ಚಿತ್ರ ರೂಪಿಸಬಹುದು. ನೋಡಿದ ಅನುಭವವನ್ನು ಅಭಿವ್ಯಕ್ತಗೊಳಿಸಲು ಚಿತ್ರಕಲೆ ಅತ್ಯಂತ ಪರಿಣಾಮಕಾರಿ ಮಾಧ್ಯಮವಾಗಿದೆ.

ಕಲೆಯನ್ನು ಅನುಭವಿಸಿ, ಆಸ್ವಾದಿಸಿ, ಆನಂದಿಸಬೇಕು. ಚಿತ್ರಕಲೆಯಲ್ಲಿ ಧರ್ಮ, ಸಂಸ್ಕøತಿ, ಸಾಮಾಜಿಕ ಪ್ರಜ್ಞೆ, ವಿಜ್ಞಾನ ಹಾಗೂ ಸಮಕಾಲೀನ ಸಮಾಜದ ಪ್ರತಿಬಿಂಬ – ಎಲ್ಲವೂ ಸಮ್ಮಿಲನವಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಚಿತ್ರಕಲೆಯು ಮಕ್ಕಳ ಸುಪ್ತ ಪ್ರತಿಭೆಯ ದ್ಯೋತಕವಾಗಿದೆ. ಸ್ಪರ್ಧೆಯಲ್ಲಿ ಪುರಸ್ಕಾರ ಪಡೆಯುವುದಕ್ಕಿಂತಲೂ ಭಾಗವಹಿಸುವುದು ಮುಖ್ಯ ಎಂದು ಅವರು ಸಲಹೆ ನೀಡಿದರು.

ಧರ್ಮಸ್ಥಳದಲ್ಲಿ ಸ್ವಚ್ಛತೆ, ಪಾವಿತ್ರ್ಯತೆ, ನಿಷ್ಠೆ, ಪ್ರಾಮಾಣಿಕತೆ ಹಾಗೂ ಸಮರ್ಪಣಾ ಭಾವದ ಸೇವೆಯನ್ನು ಅವರು ಶ್ಲಾಘಿಸಿದರು.
ಧರ್ಮಸ್ಥಳಕ್ಕೆ ಬಂದ ಕೂಡಲೇ ಇಲ್ಲಿನ ಪ್ರಶಾಂತ ಹಾಗೂ ಪವಿತ್ರ ಪರಿಸರದಿಂದ ಭಕ್ತರಲ್ಲಿ ಬಾಹ್ಯವಾಗಿ ಹಾಗೂ ಆಂತರಿಕವಾಗಿ ಸಾಕಷ್ಟು ಧನಾತ್ಮಕ ಪರಿಣಾಮಗಳಾಗುತ್ತವೆ. ಧರ್ಮಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಇಚ್ಛಾಶಕ್ತಿಯನ್ನು ಅವರು ಶ್ಲಾಘಿಸಿದರು.

ಧರ್ಮಾಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ , ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯ ವಿಕಸನಕ್ಕಾಗಿ ಅಂಚೆ-ಕುಂಚ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಚಿತ್ರಕಲೆಯಲ್ಲಿ ಅನುಕರಣೆ ಸಲ್ಲದು. ವಿದ್ಯಾರ್ಥಿಗಳು ವೈವಿಧ್ಯಮಯ ಅಭಿರುಚಿ ಹಾಗೂ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.

ಚಿತ್ರಕಲೆಯಲ್ಲಿ ಉನ್ನತ ಶಿಕ್ಷಣ ಮಾಡುವವರಿಗೆ ಧರ್ಮಸ್ಥಳದಿಂದ ವಿಶೇಷ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ಹೆಗ್ಗಡೆಯವರು ತಿಳಿಸಿದರು. ಚಿತ್ರ ಕಲಾವಿದ ಬಾಗೂರು ಮಾರ್ಕಾಂಡೇಯ ಹಾಗೂ ಮಂಗಳೂರಿನ ಸನಾತನ ನಾಟ್ಯಾಲಯದ ಕಲಾವಿದರಿಂದ ಕುಂಚ-ಗಾನ-ನೃತ್ಯ ವೈಭವ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ ಹದಿನೆಂಟನೇ ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧೆಯಲ್ಲಿ ವಿಜೇತರಿಗೆ ಇದೇ ವೇಳೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಹೇಮಾವತಿ ವೀ.ಹೆಗ್ಗಡೆ ಮತ್ತು ಡಿ.ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

Facebook Comments

Sri Raghav

Admin