ತಂಜಾವೂರು ಆಸ್ಪತ್ರೆಗೆ 25 ಲಕ್ಷ ದೇಣಿಗೆ ನೀಡಿದ ನಟಿ ಜ್ಯೋತಿಕಾ

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಆ. 9- ಸಿನಿಮಾ ಕಲಾವಿದರು ಸಮಾಜಿಕ ಕಾರ್ಯಗಳಿಗೂ ಸೈ ಎಂಬುದನ್ನು ಈಗಾಗಲೇ ತೋರಿಸಿ ಕೊಟ್ಟಿದ್ದಾರೆ, ಕೆಲವು ಕಲಾವಿದರು ನಿರಾಶ್ರಿತರಿಗೆ ನೆರವು ನೀಡಿದ್ದರೆ, ಮತ್ತೆ ಕೆಲವರು ಸರ್ಕಾರಿ ಆಸ್ಪತ್ರೆಗಳು, ಶಾಲೆಗಳ ಅಭಿವೃದ್ದಿಗೆ ನೆರವು ನೀಡಿದ್ದಾರೆ, ಈಗ ತಮಿಳು ಚಿತ್ರನಟಿ ಜ್ಯೋತಿಕಾ ಅವರ ಸರದಿ.

ತಮಿಳಿನ ಸೂಪರ್‍ಸ್ಟಾರ್ ಸೂರ್ಯ ಅವರ ಪತ್ನಿಯಾದ ಜ್ಯೋತಿಕಾ ಮೊದಲಿನಿಂದ ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದು ಈಗ ತಂಜಾವೂರು ಸರ್ಕಾರಿ ಆಸ್ಪತ್ರೆಯ ಅಭಿವೃದ್ದಿಗೆ 25 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

ಜ್ಯೋತಿಕಾ ನಟನೆಯ ಪೊನ್‍ಮಗಳ್ ವನ್‍ದಾಳ್ ಚಿತ್ರದ ಚಿತ್ರೀಕರಣವು ತಂಜಾವೂರು ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿದ್ದಾಗ ಅಲ್ಲಿನ ಅವ್ಯವಸ್ಥೆಯ ವಿರುದ್ಧ ಕೆಂಡಮಂಡಲವಾಗಿದ್ದ ಜ್ಯೋತಿಕಾ ಈಗ ಆಸ್ಪತ್ರೆಯ ಅಭಿವೃದ್ದಿಗೆ 25 ಲಕ್ಷ ದೇಣಿಗೆ ನೀಡಿದ್ದಾರೆ.

ತಂಜಾವೂರು ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲದೆ ರೋಗಿಗಳು ಪರದಾಡುತ್ತಿದ್ದರಲ್ಲದೆ ಮಕ್ಕಳ ವಾರ್ಡ್ ಕೂಡ ಅವ್ಯವಸ್ಥೆಯ ಅಗರವಾಗಿದ್ದನ್ನು ಕಂಡು ಜ್ಯೋತಿಕಾ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳ ಮೇಲೆ ಕುಪಿತಗೊಂಡಿದ್ದರು.

ಈ ದೃಶ್ಯವನ್ನು ಅಂತರ್ಜಾಲದಲ್ಲಿ ವೀಕ್ಷಿಸಿದ ಕೆಲವರು ಜ್ಯೋತಿಕಾ ಕ್ರಮವನ್ನು ಖಂಡಿಸಿ ಟೀಕೆ ಮಾಡುವುದು ಸುಲಭ ಆದರೆ ಆಸ್ಪತ್ರೆ ನಡೆಸುವುದು ಕಷ್ಟ, ಪ್ರಚಾರಕ್ಕಾಗಿ ಜ್ಯೋತಿಕಾ ಮಾಡಿರುವ ಹೊಸ ಐಡಿಯಾ ಎಂದು ಟೀಕಿಸಿದ್ದರು.

ಟೀಕೆಗಳ ಸುರಿಮಳೆಯ ನಡುವೆಯೇ ಜ್ಯೋತಿಕಾ ಈಗ ತಂಜಾವೂರು ಆಸ್ಪತ್ರೆಯ ಅಭಿವೃದ್ಧಿಗೆ ಮುಂದಾಗಿದ್ದು ಆಸ್ಪತ್ರೆಗೆ ಬೇಕಾಗುವ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಪೂರೈಸುವುದರ ಜೊತೆಗೆ ಆಸ್ಪತ್ರೆಯ ದುರಸ್ತಿ, ಮಕ್ಕಳ ವಾರ್ಡ್‍ನ್ನು ಆಧುನೀಕರಣಗೊಳಿಸುವ ಉದ್ದೇಶದಿಂದಾಗಿ 25 ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

ಜ್ಯೋತಿಕಾ ಕನ್ನಡದ ನಾಗರಹಾವು, ಒನ್‍ಟುತ್ರೀ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲೂ ನಟಿಸಿದ್ದಾರೆ. ತಂಜಾವೂರು ಆಸ್ಪತ್ರೆಯ ಅಭಿವೃದ್ಧಿಗೆ 25 ಲಕ್ಷ ರೂ.ಗಳನ್ನು ದೇಣಿಗೆ ನೀಡಿರುವ ಜ್ಯೋತಿಕಾಳ ಕ್ರಮಕ್ಕೆ ಹಲವಾರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin