ರಾಜಕೀಯ ಕೆಸರೆಚಾಟಕ್ಕೆ ಕಾರಣವಾಗಿದೆ ಮಲೆಯಾಳಂ ನಟಿಯ ಶಿಕ್ಷಕಿ ಕೆಲಸ

ಈ ಸುದ್ದಿಯನ್ನು ಶೇರ್ ಮಾಡಿ

ಪಾಟ್ನಾ, ಜೂ.25- ಮಲೆಯಾಳಂ ನಟಿಗೆ ಬಿಹಾರದಲ್ಲಿ ಶಿಕ್ಷಕಿ ಕೆಲಸ ಕೊಡುವ ವಿಚಿತ್ರ ಪರೀಕ್ಷಾ ಫಲಿತಾಂಶವೊಂದು ರಾಜಕೀಯ ಕೆಸರೆಚಾಟಕ್ಕೆ ಕಾರಣವಾಗಿದೆ. ಬಿಹಾರದ ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕಕ್ಕೆ ನಡೆದ 2019ನೆ ಸಾಲಿನ ಸ್ಫರ್ಧಾತ್ಮಕ ಪರೀಕ್ಷೆಯಲ್ಲಿ ಮಲೆಯಾಳಂನ ನಟಿ ಅನುಪಮಾ ಪರಮೇಶ್ವರ್ ಉನ್ನತ ಶ್ರೇಣೀಯಲ್ಲಿ ತೇರ್ಗಡೆಯಾಗಿದ್ದಾರೆ.

ಈ ಅನುಮಪ ಯಾರು ಎಂದು ನೆನಪಿಲ್ಲದಿದ್ದರೆ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅವರ ನಟಸಾರ್ವಭೌಮ ಚಿತ್ರವನ್ನೊಮ್ಮೆ ನೆನಪಿಸಿಕೊಳ್ಳಿ. ಅದರಲ್ಲಿ ನಾಯಕಿಯಾಗಿ ನಟಿಸಿದ ಅನುಪಮಾ ಮಲೆಯಾಳಂನಲ್ಲಷ್ಟೇ ಅಲ್ಲ ದಕ್ಷಿಣ ಭಾರತೀಯ ಭಾಷೆಗಳಲ್ಲಿ ಬೇಡಿಕೆಯ ನಟಿ. ಆಕೆಯ ಫೋಟೋ ಬಿಹಾರದ ಶಿಕ್ಷಕರ ನೇಮಕದ ವೃತ್ತಿ ಪ್ರವೇಶ ಪರೀಕ್ಷೆಯಲ್ಲಿ ಅಚ್ಚಾಗಿರುವುದು ವಿವಾದಕ್ಕೆ ಕಾರಣವಾಗಿದೆ.

ಬಿಹಾರದ ಪ್ರತಿಪಕ್ಷದ ನಾಯಕ ತೇಜೆಸ್ವಿಯಾದವ್ ಈ ವಿಷಯವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಹಾರದ ಎಂಜಿನಿಯರಿಂಗ್ ಪರೀಕ್ಷೆಯಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಅಗ್ರಸ್ಥಾನ ಪಡೆದಿದ್ದರು. ಈಗ ಮಲೆಯಾಳಂ ನಟಿ ಅನುಪಮಾ ಅವರಿಗೆ ಎಸ್ ಟಿ ಇ ಟಿ ಪರೀಕ್ಷೆಯಲ್ಲಿ ಉನ್ನತ ಸ್ಥಾನ ನೀಡಲಾಗಿದೆ.

ಅಭ್ಯರ್ಥಿಗಳು ಪರೀಕ್ಷೆಗಾಗಿ ಕಷ್ಟ ಪಟ್ಟು ಓದಿ ಭವಿಷ್ಯದ ಕನಸು ಕಟ್ಟಿಕೊಂಡಿರುತ್ತಾರೆ. ನಿತೀಶ್ ಕುಮಾರ್ ಅವರ ಸರ್ಕಾರ ಅಂತಹ ಯುವಕರ ಜೀವನವನ್ನು ವ್ಯರ್ಥ ಮಾಡುತ್ತಿದೆ. ಮತ್ತೆ ಅವರು ಅವಕಾಶ ಗಿಟ್ಟಿಸಲು ಬಹಳ ವರ್ಷಗಳು ಬೇಕು. ಈ ಸರ್ಕಾರ ಕೆಡಿಸಿರುವ ವ್ಯವಸ್ಥೆಯನ್ನು ಸರಿ ಪಡಿಸಲು ದಶಕಗಳೇ ಬೇಕು ಎಂದು ಕಿಡಿಕಾರಿದ್ದಾರೆ. ಆರ್ ಜೆ ಡಿ ಪಕ್ಷದ ನಾಯಕಿ ರೀತು ಜೈಸ್ವಾಲ್ ಫಲಿತಾಂಶದ ವಿವರ ಕುರಿತ ವಿಡಿಯೋವನ್ನು ತೇಜೆಸ್ವಿಯಾದವ್ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಪ್ರಮುಖ ವಿಷಯ ಏನಪ್ಪಾ ಅಂದರೆ, ಬಿಹಾರದ ರಿಷಿಕೇಷ್ ಕುಮಾರ್ ಎಂಬುವರು ಶಿಕ್ಷಕರ ಆಯ್ಕೆಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದರು. ಫಲಿತಾಂಶ ಪ್ರಕಟವಾದಾದ ಅವರ ಅಂಕ ಪಟ್ಟಿಯಲ್ಲಿ ಅನುಪಮಾ ಅವರ ಫೋಟೋ ಅಚ್ಚಾಗಿದೆ. ಈ ಯಡವಟ್ಟು ಬಿಹಾರ ಶಿಕ್ಷಣ ಇಲಾಖೆಯ ಬೇಜವಾಬ್ದಾರಿಗೆ ಹಿಡಿದ ಕನ್ನಡಿ ಎಂದು ಆರೋಪಿಸಿ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿವೆ.

Facebook Comments