ನಟಿ ಪ್ರಣೀತಾ ಹೆಸರಲ್ಲಿ ವಂಚಿಸಿ ಪರಾರಿಯಾದ ಆರೋಪಿಗಳಿಗಾಗಿ ಶೋಧ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.13- ಚಲನಚಿತ್ರ ನಟಿ ಪ್ರಣೀತಾ ಹೆಸರಿನಲ್ಲಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ವ್ಯವಸ್ಥಾಪಕರಿಗೆ 13.50 ಲಕ್ಷ ರೂ. ವಂಚಿಸಿ ಪರಾರಿಯಾಗಿರುವ ಆರೋಪಿಗಳಿಗಾಗಿ ಹೈಗ್ರೌಂಡ್ ಠಾಣೆ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ.

ನಟಿ ಪ್ರಣೀತಾ ಅವರನ್ನು ತಮ್ಮ ಕಂಪನಿಯ ರಾಯಭಾರಿಯನ್ನಾಗಿ ಮಾಡಿಸುವುದಾಗಿ ಅಕ್ಟೋಬರ್ 6ರಂದು ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದ ಆರೋಪಿಗಳು ಹೋಟೆಲ್‍ವೊಂದರಲ್ಲಿ ಎಸ್‍ವಿ ಗ್ರೂಪ್ ಅಂಡ್ ಡೆವಲಪರ್ಸ್ ಕಂಪನಿ ವ್ಯವಸ್ಥಾಪಕ ಅಮರನಾಥ್ ರೆಡ್ಡಿ ಅವರನ್ನು ಭೇಟಿ ಮಾಡಿದ್ದರು.

ವಂಚಕರ ಗುಂಪಿನಲ್ಲಿದ್ದ ವರ್ಷಾ ಎಂಬಾಕೆ ತಾನು ಪ್ರಣೀತಾ ಅವರ ಮ್ಯಾನೇಜರ್ ಎಂದು ಪರಿಚಯಿಸಿಕೊಂಡು ನೀವು ಹಣ ನೀಡಿದರೆ, ಪ್ರಣೀತಾ ಅವರನ್ನು ರಾಯಭಾರಿ ಆಗಿಸಲು ಅಗ್ರಿಮೆಂಟ್ ಪತ್ರ ಸಿದ್ಧಪಡಿಸುವುದಾಗಿ ಹೇಳಿದ್ದಾಳೆ.

ವಂಚಕಿ ಮಾತನ್ನು ನಂಬಿದ ಅಮರನಾಥ್ ರೆಡ್ಡಿ ಅವರು, 13.50 ಲಕ್ಷ ರೂ. ಹಣ ನೀಡಿದ್ದಾರೆ. ಹಣ ಪಡೆದ ಹೋದ ವಂಚಕರು ಮತ್ತೆ ಮೊಬೈಲ್ ಸಂಪರ್ಕಕ್ಕೂ ಸಿಗದಿದ್ದಾಗ ಮೋಸ ಹೋಗಿರುವುದು ಅರಿತು ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಹೈಗ್ರೌಂಡ್ ಠಾಣೆ ಪೊಲೀಸರು ಅಂದು ಆರೋಪಿಗಳು ಭೇಟಿ ನೀಡಿದ್ದ ಹೋಟೆಲ್‍ನ ಸಿಸಿ ಕ್ಯಾಮೆರಾ ಪರಿಶೀಲಿಸಿ, ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ.

Facebook Comments

Sri Raghav

Admin