ನಟಿ ಸೌಜನ್ಯ ಆತ್ಮಹತ್ಯೆ ಕೇಸ್ : ಪೊಲೀಸರಿಂದ ಮಹೇಶ್-ವಿವೇಕ್ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ. 2 – ನಟಿ ಸೌಜನ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಆಪ್ತ ಸಹಾಯಕ ಮಹೇಶ್ ಹಾಗೂ ನಟ ವಿವೇಕ್ ಅವರನ್ನು ಕುಂಬಳಗೂಡು ಠಾಣೆ ಪೊಲೀಸರು ಇಂದು ವಿಚಾರಣೆ ನಡೆಸಲಿದ್ದಾರೆ.ನಗರದ ಆರ್ ಆರ್ ಆಸ್ಪತ್ರೆಯಲ್ಲಿ ನಿನ್ನೆ ಸೌಜನ್ಯಳ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರ ಮಾಡಲಾಗಿದೆ.

ಸೌಜನ್ಯ ಅವರ ತಂದೆ ಪ್ರಭು ಮಾದಪ್ಪ ಅವರು, ತಮ್ಮ ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮಹೇಶ್ ಹಾಗೂ ವಿವೇಕ್ ಅವರ ಹೆಸರನ್ನು ಉಲ್ಲೇಖಿಸಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇವರಿಬ್ಬರಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ಕುಂಬಳಗೂಡು ಠಾಣೆ ಪೊಲೀಸರು ಸೂಚಿಸಿದ್ದರು.

ನನ್ನ ಮಗಳಿಗೆ ಕಿರುಕುಳ ನೀಡಲಾಗಿದೆ ಎಂದು ಸೌಜನ್ಯಳ ತಂದೆ ದೂರಿನಲ್ಲಿ ಉಲ್ಲೇಖಿಸಿ ಕೊಲೆ ಆರೋಪ ಮಾಡಿದ್ದರು. ಅವರು ನೀಡಿರುವ ದೂರು ಹಾಗೂ ಸೌಜನ್ಯ ಬರೆದಿದ್ದ ಡೆತ್ ನೋಟ್‍ನಲ್ಲಿರುವ ಅಂಶಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಮರಣೋತ್ತರ ವರದಿ ಬಂದ ನಂತರ ಸೌಜನ್ಯಳ ಸಾವು ಹೇಗಾಗಿದೆ ಎಂಬುದು ನಿಖರವಾಗಿ ಗೊತ್ತಾಗಲಿದೆ.

ಪ್ರಾಥಮಿಕ ತನಿಖೆಯಿಂದ ಆತ್ಮಹತ್ಯೆ ಎಂದು ಕಂಡು ಬಂದಿದೆಯಾದರೂ ಮಹೇಶ್ ಹಾಗೂ ವಿವೇಕ್ ಸೌಜನ್ಯಳಿಗೆ ಕಿರುಕುಳ ನೀಡಿದ್ದಾರೆಯೇ ಎಂಬುದು ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.ಸೌಜನ್ಯ ವಾಸಿಸುತ್ತಿದ್ದ ದೊಡ್ಡಬೆಲೆಯ ಸನ್‍ವರ್ತ್ ಅಪಾರ್ಟ್‍ಮೆಂಟ್‍ನಲ್ಲಿ ಸ್ಥಳ ಮಹಜರು ನಡೆಸಿರುವ ಸಬ್‍ಇನ್ಸ್‍ಪೆಕ್ಟರ್ ಕುಮಾರಸ್ವಾಮಿ ಅವರ ನೇತೃತ್ವದ ತಂಡ ಹಲವು ವಸ್ತುಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದೆ.

ಒಟ್ಟಾರೆ ಸೌಜನ್ಯ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಸ್ನೇಹಿತ ಮತ್ತು ಆಪ್ತ ಸಹಾಯಕನ ವಿಚಾರಣೆ ನಂತರವಷ್ಟೇ ನಿಖರ ಕಾರಣ ತಿಳಿಯಲಿದೆ.

Facebook Comments

Sri Raghav

Admin