ನಟಿ ಸೌಜನ್ಯ ಸಾವಿನ ಸೀಕ್ರೆಟ್ ಬೆನ್ನಟ್ಟಿದ ಪೊಲೀಸರು, ತೀವ್ರಗೊಂಡ ತನಿಖೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.1-ನಟಿ ಸೌಜನ್ಯ ಅವರ ಸಾವು ಹೇಗಾಗಿದೆ ಎಂಬುದರ ಬಗ್ಗೆ ಕುಂಬಳಗೂಡು ಠಾಣೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ ಎಂದು ರಾಮನಗರ ಜಿಲ್ಲಾ ಎಸ್ಪಿ ಗಿರೀಶ್ ಅವರು ತಿಳಿಸಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡಿದ ಅವರು, ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡುಬಂದಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸೌಜನ್ಯ ಅವರ ಸಾವು ಹೇಗಾಗಿದೆ ಎಂಬುದು ನಿಖರವಾಗಿ ತಿಳಿದುಬರಲಿದೆ ಎಂದರು.

ಸೌಜನ್ಯ ಅವರ ತಂದೆ ನೀಡಿರುವ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದರು. ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಆಪ್ತ ಸಹಾಯಕ ಮತ್ತು ತೆಲುಗು ನಟರೊಬ್ಬರ ವಿರುದ್ಧ ತಂದೆ ಪ್ರಭು ಮಾದಪ್ಪ ಅವರು ಕುಂಬಳಗೂಡು ಠಾಣೆ ಪೊಲೀಸರಿಗೆ ದೂರು ನೀಡಿದ್ದು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ತಮ್ಮ ಮಗಳಿಗೆ ಯಾರೋ ಕಿರುಕುಳ ನೀಡಿ ಆಕೆಯ ಸಾವಿಗೆ ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಒಟ್ಟಾರೆ ಸೌಜನ್ಯ ಅವರ ತಂದೆ ನೀಡಿರುವ ದೂರಿನ ಅಂಶಗಳು ಹಾಗೂ ಡೆತ್‍ನೋಟ್‍ನಲ್ಲಿರುವ ಅಂಶಗಳನ್ನು ಪರಿಗಣಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ದೊಡ್ಡಬೆಲೆಯ ಅಪಾರ್ಟ್‍ಮೆಂಟ್‍ವೊಂದರಲ್ಲಿ ಒಂದೂವರೆ ವರ್ಷದಿಂದ ಸೌಜನ್ಯ ವಾಸವಾಗಿದ್ದರು. ಎರಡು ಚಿತ್ರಗಳಲ್ಲಿ ಅವರು ನಟಿಸಿದ್ದು ಅವು ಇನ್ನು ತೆರೆ ಕಂಡಿಲ್ಲ. ಇನ್‍ಸ್ಟ್ರಾಗ್ರಾಂನಲ್ಲಿ ಸೌಜನ್ಯ ಇತ್ತೀಚೆಗೆ ತಮ್ಮ ಜೀವನದ ಬಗ್ಗೆ ಹಾಗೂ ಎದುರಿಸಿದ ಸಮಸ್ಯೆಗಳ ಬಗ್ಗೆ ಬರೆದುಕೊಂಡಿದ್ದರು. ಪೋಷಕರೊಂದಿಗೆ ಪ್ರತಿನಿತ್ಯ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದರು.

ನಿನ್ನೆ ಬೆಳಗ್ಗೆಯೂ ಸಹ ಪೊಷಕರೊಂದಿಗೆ ಮಾತನಾಡಿದ್ದ ಸೌಜನ್ಯ ಕೆಲವೇ ನಿಮಿಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಪೊಷಕರನ್ನು ಕಂಗಾಲಾಗಿಸಿದೆ. ಆತ್ಮಹತ್ಯೆ ಸ್ಥಳದಲ್ಲಿ ದೊರೆತ ನಾಲ್ಕು ಪುಟಗಳ ಡೆತ್‍ನೋಟ್‍ನ್ನು ವಶಪಡಿಸಿಕೊಂಡಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

Facebook Comments