ಖಾಸಗಿ ಆಸ್ಪತ್ರೆಗಳ ಕಳ್ಳಾಟದ ವಿರುದ್ಧ ನಟಿ ಸುಧಾರಾಣಿ ಆಕ್ರೋಶ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.28- ಕೋವಿಡ್-19 ನೆಪದಲ್ಲಿ ಬೇರೆ ಕಾಯಿಲೆಗಳಿಗೂ ಚಿಕಿತ್ಸೆ ಕೊಡದೆ ಖಾಸಗಿ ಆಸ್ಪತ್ರೆಗಳು ಜನ ಸಾಮಾನ್ಯರನ್ನು ಸತಾಯಿಸುತ್ತಿವೆ ಎಂದು ಖ್ಯಾತ ಚಿತ್ರನಟಿ ಸುಧಾರಾಣಿ ಆರೋಪಿಸಿದ್ದಾರೆ .

ಸುಧಾರಾಣಿ ಅವರ ಅಣ್ಣನ ಮಗಳಿಗೆ ಮೂತ್ರಪಿಂಡದ ಸಮಸ್ಯೆ ಇದ್ದು, ಈ ಮೊದಲು ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಶನಿವಾರ ಮತ್ತೆ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಭಾನುವಾರ ಹೇಗೋ ಸಹಿಸಿಕೊಂಡಿದ್ದರು.

ಆದರೆ ಸೋಮವಾರ ರಾತ್ರಿ ನೋವು ತಡೆಯಲಾಗದೆ ಪರಿಸ್ಥಿತಿ ವಿಕೋಪಕ್ಕೆ ಹೋದಾಗ ರಾತ್ರಿ 11.30ರ ಸುಮಾರಿಗೆ ಅಪೋಲೋ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.

ಆದರೆ ಆಸ್ಪತ್ರೆಯ ಸಿಬ್ಬಂದಿ ಮತ್ತು ವೈದ್ಯರು ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ ಎಂದು ಒಂದೇ ರೀತಿಯ ಉತ್ತರ ಹೇಳಿ ಚಿಕಿತ್ಸೆಗೆ ನಿರಾಕರಿಸಿದ್ದರು ಎಂದು ಸುಧಾರಾಣಿ ಆರೋಪಿಸಿದ್ದಾರೆ.

ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಮೀಸಲಿರಿಸಿರುವ ಎರಡು ಐಸೋಲೆಷನ್ ವಾರ್ಡ್‍ಗಳು ಪೂರ್ತಿ ಖಾಲಿ ಇದ್ದವು. ಐಸಿಯುನಲ್ಲೂ ಬೆಡ್ ಇದ್ದದನ್ನು ನಾನೇ ನನ್ನ ಕಣ್ಣಾರೆ ಕಂಡಿದ್ದೇನೆ. ಆದರೂ ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರು ನೋವಿನಿಂದ ಬಳಲುತ್ತಿದ್ದ ರೋಗಿಯನ್ನು ಚಿಕಿತ್ಸೆಗೆ ದಾಖಲಿಸಿಕೊಳ್ಳದೆ ಸತಾಯಿಸಿದರು.

ಕನಿಷ್ಠ ಪ್ರಾಥಮಿಕ ಚಿಕಿತ್ಸೆಯನ್ನಾದರೂ ನೀಡಿ ಎಂದು ಬೇಡಿಕೊಂಡರು ಸ್ಪಂದಿಸಲಿಲ್ಲ. ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ ಎಂಬ ಸಿದ್ದ ಉತ್ತರವನ್ನೇ ನೀಡುತ್ತಾ ನಿರ್ಲಕ್ಷ್ಯತೆ ತೋರಿಸಿದರು ಎಂದು ಸುಧಾರಾಣಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಸುಮಾರು ಅರ್ಧ ಗಂಟೆ ಕಳೆದರು ಚಿಕಿತ್ಸೆ ಸಿಗದೆ ಇದ್ದಾಗ ಬೇರೆ ದಾರಿ ಕಾಣದೆ ಅರ್ಧ ರಾತ್ರಿಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಫೋನ್ ಮಾಡಬೇಕಾಯಿತು.

ತಡರಾತ್ರಿಯಲ್ಲೂ ನಮ್ಮ ಕರೆಗೆ ಸ್ಪಂದಿಸಿದ ಆಯುಕ್ತರು ಹೊಯ್ಸಳ ದಳವನ್ನು ಸ್ಥಳಕ್ಕೆ ಕಳುಹಿಸಿದರು. ಖುದ್ದಾಗಿ ಆಯುಕ್ತರೇ ಆಸ್ಪತ್ರೆಯ ಪ್ರಮುಖರ ಜೊತೆ ಮಾತನಾಡಿದರು. ಅನಂತರ ರೋಗಿಯನ್ನು ದಾಖಲಿಸಿಕೊಂಡು ಚಿಕಿತ್ಸೆ ಕೊಟ್ಟಿದ್ದಾರೆ ಎಂದು ಸುಧಾರಾಣಿ ಹೇಳಿದರು.

ನಾನು ಸಿನಿಮಾ ನಟಿ, ಜನಪ್ರಿಯತೆ ಇದೆ, ಪೊಲೀಸ್ ಆಯುಕ್ತರು ಪರಿಚಯ ಇದ್ದಾರೆ. ಹಾಗಾಗಿ ಪ್ರಭಾವ ಬಳಸಿ ಕಷ್ಟಪಟ್ಟು ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಯಿತು. ಜನಪ್ರಿಯತೆ ಇರುವ ನನ್ನಂತವರ ಪಾಡೇ ಹೀಗಾದರೆ ಇನ್ನು ಜನಸಾಮಾನ್ಯರ ಗತಿ ಏನು? ಕೊರೊನಾ ಕಾಲದಲ್ಲಿ ಬೇರೆ ಖಾಯಿಲೆಗಳಿಗೆ ಚಿಕಿತ್ಸೆ ಕೊಡಬಾರದೆ.

ಈ ಮೊದಲಿನಿಂದ ಬಾಧಿಸುತ್ತಿರುವ ಖಾಯಿಲೆಗಳಿಂದ ಜನ ಸಾಯಬೇಕೆ ಎಂದು ಸುಧಾರಾಣಿ ಪ್ರಶ್ನಿಸಿದ್ದಾರೆ. ಚಿಕಿತ್ಸೆ ಕೊಡದೆ ಸತಾಯಿಸುವಾಗ ನಾನು ಪೊಲೀಸ್ ಆಯುಕ್ತರಿಗೆ, ಮಾಧ್ಯಮದವರಿಗೆ ಫೋನ್ ಮಾಡುತ್ತೇನೆ ಎಂದು ಹೇಳಿದರೂ ಆಸ್ಪತ್ರೆಯವರು ಕ್ಯಾರೆ ಅನ್ನಲಿಲ್ಲ.

ಪೊಲೀಸ್ ಆಯುಕ್ತರು ಮಧ್ಯ ಪ್ರವೇಶ ಮಾಡದೇ ಇದ್ದಿದ್ದರೆ ಚಿಕಿತ್ಸೆ ಸಿಗುತ್ತಲೇ ಇರಲಿಲ್ಲ. ಕೊನೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಬೆಳಗ್ಗೆ ಇಲ್ಲಿ ಆಗಲ್ಲ, ಬೇರೆ ಕಡೆ ಕರೆದುಕೊಂಡು ಹೊಃಗಿ ಎಂದರು. ಕೊನೆಗೆ ಅಲ್ಲಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇವೆ ಎಂದು ತಿಳಿಸಿದರು.

ಕೊರೊನಾ ಸೋಂಕಿದೆ ಹೊರಗಡೆ ಹೆಚ್ಚು ಓಡಾಡಬೇಡಿ ಎನ್ನುತ್ತಾರೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ಇದ್ದರೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡದೇ ಇನ್ನೇನು ಮಾಡಲು ಸಾಧ್ಯ ಎಂದು ಸುಧಾರಾಣಿ ಪ್ರಶ್ನಿಸಿದರು.

Facebook Comments

Sri Raghav

Admin