ರಸ್ತೆ ಅಪಘಾತ, ಹಾಸ್ಯ ನಟಿ ಸುನೇತ್ರಾ ಪಂಡಿತ್‌ಗೆ ಗಂಭೀರ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮೇ 8-ಕಿರುತೆರೆಯ ಖ್ಯಾತ ನಟಿ, ಡಬ್ಬಿಂಗ್ ಕಲಾವಿದೆ ಸುನೇತ್ರ ಪಂಡಿತ್ ಅವರು ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆ ತಡರಾತ್ರಿ ಶೂಟಿಂಗ್ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುವಾಗ ಎನ್.ಆರ್.ಕಾಲೋನಿಯ 9ನೇ ಅಡ್ಡರಸ್ತೆಯಲ್ಲಿ ಅವೈಜ್ಞಾನಿಕ ಹಂಪ್ ಹಾಗೂ ರಸ್ತೆಗುಂಡಿ ಕಾರಣದಿಂದ ಅಪಘಾತ ಸಂಭವಿಸಿ ಕೆಳಗೆ ಬಿದ್ದ ಅವರಿಗೆ ರಕ್ತಸ್ರಾವವಾಗಿದೆ. ತಲೆಗೆ ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯ ಸಹಾಯದಿಂದ ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕನ್ನಡದ ಕಿರುತೆರೆಯಲ್ಲಿ ಸುನೇತ್ರ ಪಂಡಿತ್ ಒಳ್ಳೆಯ ಹೆಸರು ಗಳಿಸಿದ್ದಾರೆ. ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಾಮಿಡಿ ಪಾತ್ರಗಳಲ್ಲಿ ಬರಪೂರ ಮನರಂಜನೆ ನೀಡುವ ಮೂಲಕ ಜನ ಮನ ಗೆದಿದ್ದಾರೆ. ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಸಕ್ರಿಯವಾಗಿರುವ ಅವರು ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

ಸುನೇತ್ರ ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಅವರು ಅಭಿಮಾನಿಗಳು, ಆಪ್ತರು ಹಾರೈಸಿದ್ದಾರೆ. ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿ ಮತ್ತು ಅವೈಜ್ಞಾನಿಕ ಹಂಪ್‍ಗಳಿಂದ ಪದೇ ಪದೇ ಅಪಘಾತಗಳು ಸಂಭವಿಸಿ ಸಾವುನೋವುಗಳು ಉಂಟಾಗುತ್ತಿರುವುದು ಹೆಚ್ಚಾಗುತ್ತಿವೆ. ಬೆಂಗಳೂರಿನ ರಸ್ತೆಗಳ ದುಸ್ಥಿತಿಗಳ ಬಗ್ಗೆ ಇರುವ ದೂರುಗಳಿಗೆ ಲೆಕ್ಕವೇ ಇಲ್ಲ. ಅವೈಜ್ಞಾನಿಕ ಹಂಪ್ ಎಲ್ಲೆಂದರಲ್ಲಿ ಗುಂಡಿಗಳು, ಕಾಮಗಾರಿಗಳ ಕಾರಣದಿಂದಾಗಿ ಉಂಟಾಗಿರುವ ಹೊಂಡಾಗಳು ಎಲ್ಲಾ ಕಡೆ ಕಾಣಸಿಗುತ್ತವೆ.

ಪ್ರತಿದಿನ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಲೇ ಇದೆ. ಕಳೆದ ತಿಂಗಳ ಅವಯಲ್ಲಿ ನಾಲ್ಕೈದು ಇಂಥ ಪ್ರಕರಣಗಳು ನಡೆದಿದ್ದರೂ ಬಿಬಿಎಂಪಿ ಎಚ್ಚೆತ್ತುಕೊಂಡಿಲ್ಲ. ಮರಣದ ಮನೆಯ ಬಾಗಿಲಿನಂತೆ ಎದುರಾಗುವ ಇಂಥ ರಸ್ತೆಗಳಲ್ಲಿ ಪ್ರಾಣವನ್ನು ಕೈಯಲ್ಲಿಡಿದುಕೊಂಡು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Facebook Comments