ಡ್ರಗ್ಸ್ ಮುಕ್ತ ಸಮಾಜಕ್ಕೆ ತಾರಾ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.1- ಮಾದಕ ವಸ್ತು ಜಾಲ ಕನ್ನಡ ಚಲನಚಿತ್ರ ರಂಗದಲ್ಲಿ ಹರಡುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಆತಂಕ ವ್ಯಕ್ತಪಡಿಸಿದ ನಟಿ ತಾರಾ ಅನುರಾಧಾ ಅವರು ಇದನ್ನು ಮಟ್ಟ ಹಾಕಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಶ್ರೀಲಂಕಾ ದೇಶದಲ್ಲಿ ಡ್ರಗ್ಸ್ ಮಾರಾಟ ಮಾಡುವವರನ್ನು ನೇಣುಗಂಬಕ್ಕೇರಿಸುವ ಕಾನೂನು ಜಾರಿಗೊಳಿಸಲಾಗಿದೆ. ಅಂತಹ ಕಠಿಣ ಕಾನೂನನ್ನು ನಮ್ಮಲ್ಲಿ ಜಾರಿಗೊಳಿಸಿದರೆ ಡ್ರಗ್ಸ್ ನಿಯಂತ್ರಣಕ್ಕೆ ಬರಲು ಸಾಧ್ಯವಾಗುತ್ತದೆ ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ. ಇಂದು ಬಿಬಿಎಂಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ಮಾರಾಟ ಜಾಲದ ಬಗ್ಗೆ ಕಠಿಣ ಕ್ರಮ ಕೈಗೊಂಡು ಯುವ ಪೀಳಿಗೆಯನ್ನು ರಕ್ಷಣೆ ಮಾಡಿ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂದು ಹೇಳಿದರು.

ಇತ್ತೀಚೆಗೆ ಕೆಲವು ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಜನತೆ, ಚಲನಚಿತ್ರ ರಂಗದ ಹಲವಾರು ಕಲಾವಿದರ ಮೇಲೆ ಡ್ರಗ್ಸ್ ಸೇವನೆ ಮಾಡುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ. ನಾನು ಚಲನಚಿತ್ರರಂಗದಲ್ಲಿ ಮೂರು ದಶಕಗಳಿಂದ ಇದ್ದೇನೆ. ಇಂತಹ ಘಟನೆಗಳನ್ನು ನೋಡಿಲ್ಲ.

ಚಲನಚಿತ್ರರಂಗದಲ್ಲಿ ಒಳ್ಳೆಯವರು, ಕೆಟ್ಟವರು ಇದ್ದಾರೆ. ಮಾದಕ ವಸ್ತುವಿನಿಂದ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ವ್ಯಸನಿಗಳಾಗುತ್ತಿದ್ದಾರೆ. ಇದನ್ನು ತಪ್ಪಿಸಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಇದೆ ಎಂದು ಹೇಳಿದರು. ಚೀನಾ, ಸಿಂಗಪೂರ್, ಅರಬ್ ದೇಶಗಳಲ್ಲಿ ಡ್ರಗ್ಸ್‍ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಮ್ಮ ದೇಶದಲ್ಲಿ ಏಕೆ ಸಾಧ್ಯವಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿದೆ.

ಶ್ರೀಲಂಕಾ ಮಾದರಿಯ ಕಠಿಣ ಕಾನೂನು ಕ್ರಮವನ್ನು ಜಾರಿಗೊಳಿಸಿದರೆ ಡ್ರಗ್ಸ್ ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ. ಕೊಳ್ಳುವವರೇ ಇಲ್ಲವಾದಾಗ ಮಾರಾಟ ಮಾಡುವವರಿಗೆ ಏನು ಕೆಲಸ. ನಮ್ಮಲ್ಲಿರುವ ಪ್ರತಿಷ್ಠಿತ ಖಾಸಗಿ ಶಾಲಾ-ಕಾಲೇಜುಗಳು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಪೋಷಕರು ತಮ್ಮ ಮಕ್ಕಳಿಗೆ ಇದರ ಬಗ್ಗೆ ಅರಿವು ಮೂಡಿಸಿದರೆ ದುಶ್ಚಟಗಳಿಗೆ ಬಲಿಯಾಗುವುದನ್ನು ತಡೆಯಬಹುದು.

ಕೆಲವು ಐತಿಹಾಸಿಕ ಯೋಜನೆಗಳನ್ನು ನೀಡಿರುವ ಮುಖ್ಯಮಂತ್ರಿಗಳು ಡ್ರಗ್ಸ್ ನಿಯಂತ್ರಣಕ್ಕೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡಬೇಕೆಂದು ಅವರು ಹೇಳಿದರು. ಚಲನಚಿತ್ರ ರಂಗ ಒಂದು ಕುಟುಂಬವಿದ್ದಂತೆ. ಡ್ರಗ್ಸ್ ತೆಗೆದುಕೊಳ್ಳುವ ನಟ-ನಟಿಯರು ತಿದ್ದಿಕೊಳ್ಳುವ ಸಮಯ. ಮಕ್ಕಳು, ಕಾಲೇಜು ವಿದ್ಯಾರ್ಥಿಗಳ ಜೀವ ಮುಖ್ಯ. ಮಾದಕ ವ್ಯಸನಿಗಳು ಕಣ್ಣಿನ ಔಷಧಿ ಬಳಕೆ ಮಾಡುತ್ತಾರೆ.

ಕಣ್ಣಿನ ಔಷಧಿ ತೆಗೆದುಕೊಳ್ಳುವವರ ಬಗ್ಗೆ ನಿಗಾ ವಹಿಸಬೇಕು. ರಕ್ತ, ಗಂಟಲು ದ್ರವ, ಕೂದಲು ಮೂಲಕ ಮಾದಕ ವ್ಯಸನಿಗಳನ್ನು ಪತ್ತೆಹಚ್ಚಬೇಕು. ಈ ಹಿನ್ನೆಲೆಯಲ್ಲಿ ನಾನು ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸುತ್ತಿದ್ದೇನೆ. ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬ ನಾಗರಿಕರೂ ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದರು.

ಇಂದ್ರಜಿತ್ ಲಂಕೇಶ್ 15 ಜನರ ಹೆಸರು ಹೇಳಿದ್ದಾರೆ ಎಂದು ಮಾಧ್ಯಮದಲ್ಲಿ ಕೇಳಿದ್ದೇನೆ. ಅಂತಹವರ ವಿರುದ್ಧ ತನಿಖೆಯಾಗಲಿ ಮತ್ತು ಅವರಿಗೆ ಶಿಕ್ಷೆಯಾಗಲಿ ಎಂದು ತಾರಾ ತಿಳಿಸಿದರು.

Facebook Comments