ದಸರಾಗೆ ಕೆಎಸ್‌ಆರ್‌ಟಿಸಿಯಿಂದ 2500 ವಿಶೇಷ ಬಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ. 27- ವಿಶ್ವ ವಿಖ್ಯಾತ ಮೈಸೂರ ದಸರಾ ಹಾಗೂ ರಜೆಗಳ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಅ. 4ರಿಂದ 8ರ ವರೆಗೆ ಬೆಂಗಳೂರಿನಿಂದ ವಿವಿಧ ಕಡೆ ಹಾಗೂ ಹೊರರಾಜ್ಯಗಳಿಗೆ 2500 ಹೆಚ್ಚುವರಿ ಬಸ್‍ಗಳು ಸಂಚರಿಸಲಿವೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರಸ್ತುತ ಕಾರ್ಯಾಚರಣೆ ಮಾಡಲಾಗುತ್ತಿರುವ ವೇಗದೂತ, ರಾಜಹಂಸ, ಐರಾವತ ಹಾಗೂ ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆಕ್ಸಲ್) ಸಾರಿಗೆ ಸೇವೆಗಳ ಜೊತೆಗೆ ಈ ಕೆಳಕಂಡಂತೆ ಹೆಚ್ಚುವರಿ ಬಸ್‍ಗಳ ವಿಶೇಷ ಸಾರಿಗೆ ಸೇವೆಗಳ ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಂಡಿದೆ.

ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ಬಸ್‍ಗಳು ಹೊರಡಲಿವೆ. ನಂತರ ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಅ. 9ರಿಂದ ವಿಶೇಷ ವಾಹನಗಳು ಕಾರ್ಯಾಚರಣೆ ಮಾಡಲಿವೆ. ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ,

ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಮುಂತಾದ ಸ್ಥಳಗಳಿಗೆ ಹಾಗೂ ನೆರೆರಾಜ್ಯಗಳಲ್ಲಿನ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿನಾಪಳ್ಳಿ, ಪುದುಕೋಟೆ, ಮಧುರೈ, ಪಣಜಿ, ಶಿರಡಿ, ಪೂನಾ, ಏರ್ನಾಕುಲಂ, ಪಾಲ್ಗಾಟ್ ಹಾಗೂ ಇತರೆ ಸ್ಥಳಗಳಿಗೆ ವಿಶೇಷ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುವುದು.

ಮೈಸೂರು ದಸರಾ ಪ್ರಯುಕ್ತ 350 ವಿಶೇಷ ಸಾರಿಗೆ ವ್ಯವಸ್ಥೆ:
ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರಿಗೆ ಪ್ರತ್ಯೇಕವಾಗಿ 175 ಹೆಚ್ಚುವರಿ ವಾಹನಗಳ ಕಾರ್ಯಾಚರಣೆ ಹಾಗೂ ಮೈಸೂರಿನ ಸುತ್ತಮುತ್ತಲಿನ ಪ್ರೇಕ್ಷಣೀಯ, ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಾದ ಚಾಮುಂಡಿ ಬೆಟ್ಟ, ಕೆ.ಆರ್.ಎಸ್.ಅಣೆಕಟ್ಟು/ಬೃಂದಾವನ, ಶ್ರೀರಂಗಪಟ್ಟಣ, ನಂಜನಗೂಡು ಸೇರಿದಂತೆ ಮಡಿಕೇರಿ, ಮಂಡ್ಯ, ಮಳವಳ್ಳಿ, ಎಚ್.ಡಿ.ಕೋಟೆ, ಚಾಮರಾಜನಗರ, ಹುಣಸೂರು, ಕೆ.ಆರ್.ನಗರ, ಗುಂಡ್ಲುಪೇಟೆ ಇತ್ಯಾದಿ ಸ್ಥಳಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲು 175 ವಾಹನಗಳು ಸೇರಿ ಒಟ್ಟಾರೆ 350 ದಸರಾ ವಿಶೇಷ ವಾಹನಗಳನ್ನು ಕಾರ್ಯಾಚರಿಸಲು ಯೋಜಿಸಲಾಗಿದೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಫ್ಲೈ ಬಸ್ (Fly Bus) ಮೂಲಕ ನೇರ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಮೊಬೈಲ್ ಮೂಲಕ ಎಂ-ಬುಕಿಂಗ್ ಹಾಗೂ ಇ-ಟಿಕೇಟ್ ಬುಕಿಂಗ್‍ನ್ನು www.ksrtc.in ವೆಬ್ ಸೈಟ್ ಮುಖಾಂತರ ಮಾಡಬಹುದಾಗಿದೆ. ಮೈಸೂರು ಗ್ರಾಮಾಂತರ ಹಾಗೂ ನಗರ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಹಾಗೂ ಪ್ರವಾಸಿಗರಿಗೆ ಕರಾರಸಾ ನಿಗಮದ ಸಾರಿಗೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲು ಮಾಹಿತಿ ಕೇಂದ್ರವನ್ನು ಪ್ರತ್ಯೇಕವಾಗಿ ತೆರೆಯಲಾಗುವುದು.

ಕರ್ನಾಟಕ ಹಾಗೂ ನೆರೆರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಪುದುಚೇರಿ ರಾಜ್ಯಗಳಲ್ಲಿರುವ ಒಟ್ಟು 708 ಗಣಕೀಕೃತ ಮುಂಗಡ ಆಸನಗಳನ್ನು ಕಾಯ್ದಿರಿಸುವ ಕೌಂಟರ್‍ಗಳ ಮೂಲಕ ನಿಗಮದ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಬಹುದಾಗಿದೆ.

ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೇಟ್ ಕಾಯ್ದಿರಿಸಿದಲ್ಲಿ ಶೇಕಡ 5ರಷ್ಟು ರಿಯಾಯಿತಿ ನೀಡಲಾಗುವುದು ಹಾಗೂ ಹೋಗುವ ಮತ್ತು ಬರುವ ಪ್ರಯಾಣದ ಟಿಕೇಟ್‍ನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇಕಡ 10 ರಷ್ಟು ರಿಯಾಯಿತಿ ನೀಡಲಾಗುವುದು. ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡವಾಗಿ ಕಾಯ್ದಿರಿಸಲಾಗಿರುವ ಟಿಕೇಟುಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ/ಪಿಕ್‍ಅಪ್ ಪಾಯಿಂಟ್‍ನ ಹೆಸರನ್ನು ಗಮನಿಸುವಂತೆ ಕೋರಲಾಗಿದೆ.

ಅಲ್ಲದೇ, ನಿಗಮದ ಕಾರ್ಯಾಚರಣೆ ವ್ಯಾಪ್ತಿಯಲ್ಲಿನ ಎಲ್ಲಾ ತಾಲ್ಲೂಕು/ಜಿಲ್ಲಾ ಬಸ್ ನಿಲ್ದಾಣಗಳಿಂದ ಸಂಚಾರ ಒತ್ತಡಕ್ಕನುಗುಣವಾಗಿ ವಿಶೇಷ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುವುದು ಎಂದು ಸಂಸ್ಥೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook Comments