ದಸರಾ-ದೀಪಾವಳಿ ಪ್ರಯುಕ್ತ ಸಾವಿರಕ್ಕೂ ಹೆಚ್ಚು ಕೆಎಸ್ಆರ್‌ಟಿಸಿ ಹೆಚ್ಚುವರಿ ಬಸ್ ವ್ಯವಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ದಸರಾ ಮತ್ತು ದೀಪಾವಳಿ ಪ್ರಯುಕ್ತ ತಮ್ಮ ಊರುಗಳಿಗೆ ತೆರಳುವಂತಹ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬೆಂಗಳೂರಿನಿಂದ ಒಂದು ಸಾವಿರ ಹೆಚ್ಚುವರಿ ಬಸ್ಗಳ ಸಂಚಾರ ಆರಂಭಿಸಲಿದೆ.ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆ ಸಾಮಾನ್ಯವಾಗಿ ಹೆಚ್ಚಿರುತ್ತದೆ. ಹೀಗಾಗಿ ದಸರಾ ಸಂದರ್ಭದಲ್ಲಿ 1000 ಮತ್ತು ದೀಪಾವಳಿ ಸಂದರ್ಭದಲ್ಲಿ 1000 ಹೆಚ್ಚುವರಿ ಬಸ್ಗಳ ಸಂಚಾರ ನಡೆಸಲಾಗುತ್ತಿದೆ.

ದಸರಾ ಅವಧಿಯಲ್ಲಿ ಅಕ್ಟೋಬರ್ 13ರಿಂದ 21 ರವರೆಗೆ ಮತ್ತು ದೀಪಾವಳಿ ಸಂದರ್ಭದಲ್ಲಿ ಅಕ್ಟೋಬರ್ 29ರಿಂದ ನವೆಂಬರ್ 7ರ ವರೆಗೆ ವಿಶೇಷ ಬಸ್ಗಳನ್ನು ಕಾರ್ಯಾಚರಣೆ ಇರುತ್ತದೆ. ಹೆಚ್ಚುವರಿ ಬಸ್ಗಳು ಬೆಂಗಳೂರಿನಿಂದ ರಾಜ್ಯದೊಳಗಿನ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಮೈಸೂರು, ಮಡಿಕೇರಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ ಬೀದರ್ ಮುಂತಾದ ಸ್ಥಳಗಳಿಗೆ ತೆರಳುತ್ತವೆ.

ಇದಲ್ಲದೆ ಹೊರರಾಜ್ಯದ ತಿರುಪತಿ, ವಿಜಯವಾಡ, ಹೈದರಾಬಾದ್, ತಿರುವನಂತಪುರ, ಕೊಟ್ಟಾಯಂ, ಚೆನ್ನೈ, ಕೊಯಮತ್ತೂರು, ಪೂನಾ, ಪಣಜಿ ಮುಂತಾದ ಸ್ಥಳಗಳಿಗೂ ಬಸ್ಗಳ ಸಂಚಾರ ಇರಲಿದೆ. ಹಬ್ಬದ ಪ್ರಯುಕ್ತ ಹೆಚ್ಚುವರಿ ಬಸ್ಗಳ ಸಂಚಾರ ಇರುತ್ತದೆಯಾದರೂ ಪ್ರಯಾಣದ ದರದಲ್ಲಿ ಯಾವುದೇ ಹೆಚ್ಚಳ ಇರುವುದರಿಲ್ಲ ಎಂದು ಕೆಎಸ್ಆರ್ಟಿಸಿ ಸ್ಪಷ್ಟಪಡಿಸಿದೆ.

ನಿಗಮದ ವೆಬ್ಸೈಟ್ www.ksrtc.karnataka.gov.in ಹಾಗೂ ಕರ್ನಾಟಕ ಹಾಗೂ ಇತರೆ ರಾಜ್ಯಗಳಲ್ಲಿ ಇರುವ ಬುಕಿಂಗ್ ಕೌಂಟರ್ಗಳಲ್ಲಿ ಮುಂಗಡ ಆಸನಗಳನ್ನು ಕಾಯ್ದಿರಿಸಬಹುದು ಎಂದು ಕೆಎಸ್ಆರ್ಟಿಸಿ ಪ್ರಕಟಣೆ ತಿಳಿಸಿದೆ.

Facebook Comments

Sri Raghav

Admin