ರಾಮ ಮಂದಿರ ಭೂಮಿಪೂಜೆ : ಅಯೋಧ್ಯೆಗೆ ತೆರಳಿದ ನಿರ್ಮಾಲಾನಂದನಾಥ ಶ್ರೀಗಳು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.4- ನಾಳೆ ನಡೆಯಲಿರುವ ಶ್ರೀರಾಮ ದೇವಾಲಯ ನಿರ್ಮಾಣದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆದಿಚುಂಚನಗಿರಿ ಪೀಠದ ಡಾ.ಶ್ರೀ ನಿರ್ಮಾಲಾನಂದನಾಥ ಶ್ರೀಗಳು ಅಯೋಧ್ಯೆಗೆ ತೆರಳಿದ್ದಾರೆ.

ಶ್ರೀರಾಮಜನ್ಮ ಭೂಮಿ ಟ್ರಸ್ಟ್‍ನ ಆಹ್ವಾನದ ಮೇರೆಗೆ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರು ಇಂದು ಬೆಳಗ್ಗೆಯೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಖ್ನೋಗೆ ಪ್ರಯಾಣ ಬೆಳೆಸಿದ್ದಾರೆ ಲಖನೌಗೆ ಭೇಟಿ ನೀಡಿದ ಬಳಿಕ ವಾರಣಾಸಿಯಲ್ಲಿರುವ ತಮ್ಮ ಮಠದ ವಿಭಾಗದಲ್ಲಿ ನೆಲೆಯೂರಲಿದ್ದಾರೆಂದು ತಿಳಿದುಬಂದಿದೆ.

ವಾರಣಾಸಿಯಿಂದ ರಸ್ತೆ ಮೂಲಕ ಕಾರ್ಯಕ್ರಮ ನಡೆಯಲಿರುವ ಅಯೋಧ್ಯೆಗೆ ತೆರಳಲಿದ್ದಾರೆ. ವಿಶೇಷ ಎಂದರೆ, ಕರ್ನಾಟಕದಿಂದ ರಾಮಮಂದಿರ ನಿರ್ಮಾಣದ ಶಂಕುಸ್ಥಾಪನೆಯಲ್ಲಿ ಭಾಗವಹಿಸುತ್ತಿರುವ ಏಕೈಕ ಧರ್ಮಗುರು ಶ್ರೀ ಡಾ.ನಿರ್ಮಾಲಾನಂದನಾಥ ಶ್ರೀಗಳು ಮಾತ್ರ.
ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ , ರಾಜ್ಯದಿಂದ ಮೂವರು ಶ್ರೀಗಳನ್ನು ಮಾತ್ರ ಕಾರ್ಯಕ್ರಮಕ್ಕೆ ಆಹ್ವಾನಿಸಿತ್ತು.

ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೂ ಆಹ್ವಾನ ನೀಡಲಾಗಿತ್ತು. ಆದರೆ, ಶ್ರಾವಣ ಮಾಸದ ವೇಳೆ ಚಾತುರ್ಮಾಸ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು ತಿಳಿದುಬಂದಿದೆ.

ಸಾಮಾನ್ಯವಾಗಿ ಚಾರ್ತುಮಾಸದ ವೇಳೆ ಶ್ರೀಗಳು ಮಠ ಬಿಟ್ಟು, ಎಲ್ಲಿಯೂ ಹೋಗುವುದಿಲ್ಲ. ಇದೇ ರೀತಿ ವೀರೇಂದ್ರ ಹೆಗ್ಗಡೆ ಅವರು ಕೂಡ ಕೆಲವು ಕಾರಣಗಳಿಂದ ಶ್ರೀರಾಮ ಮಂದಿರ ನಿರ್ಮಾಣದ ಭೂಮಿಪೂಜೆಗೆ ಗೈರು ಹಾಜರಾಗಲಿದ್ದಾರೆ.

ಆದಿಚುಂಚನಗಿರಿ ಮಠದ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ನ ಸದಸ್ಯರೂ ಆಗಿರುವ ಹಿನ್ನೆಲೆಯಲ್ಲಿ ಆಹ್ವಾನದ ಮೇರೆಗೆ ನಿರ್ಮಾಲನಂದಾನಾಥ ಸ್ವಾಮೀಜಿಗಳು ಭಾಗವಹಿಸುತ್ತಿದ್ದಾರೆ ಎನ್ನಲಾಗಿದೆ.

ನಾಳೆ ನಡೆಯಲಿರುವ ಕಾರ್ಯಕ್ರಮಕ್ಕೆ ಭಾಗವಹಿಸುವಂತೆ ಶ್ರೀಗಳನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೂರವಾಣಿ ಕರೆ ಮಾಡಿ ಆಹ್ವಾನ ನೀಡಿದ್ದರು ಎಂದು ಮಠದ ಮೂಲಗಳು ತಿಳಿಸಿವೆ.

ಯೋಗಿ ಆದಿತ್ಯನಾಥ್ ಕೂಡ ನಾಥ ಪಂಥದ ಅನುಯಾಯಿಯಾಗಿದ್ದು, ನಿರ್ಮಲಾನಂದನಾಥ ಶ್ರೀಗಳ ಮತ್ತು ಅವರ ನಡುವೆ ನಿಕಟ ಸಂಬಂಧವಿದೆ.

Facebook Comments

Sri Raghav

Admin