ಡ್ರಗ್ಸ್​ ಪ್ರಕರಣದ ಆರೋಪಿ ಆದಿತ್ಯ ಆಳ್ವ ಚನ್ನೈನಲ್ಲಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.12- ಸ್ಯಾಂಡಲ್‍ವುಡ್ ಡ್ರಗ್ಸ್ ಜಾಲದ ನಂಟು ಹೊಂದಿರುವ ಆರೋಪಕ್ಕೆ ಗುರಿಯಾಗಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಆದಿತ್ಯ ಆಳ್ವ ಕೊನೆಗೂ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಚೆನ್ನೈನ ಹೊರವಲಯ ದಲ್ಲಿರುವ ಹೋಂಸ್ಟೇನಲ್ಲಿ ಕಳೆದ 15 ದಿನಗಳಿಂದ ತಂಗಿದ್ದ ಆದಿತ್ಯ ಆಳ್ವ ಅವರ ಮೊಬೈಲ್ ಟವರ್ ಆಧರಿಸಿ ರಾತ್ರಿ ಸಿಸಿಬಿ ಪೊಲೀಸರು ಚೆನ್ನೈಗೆ ತೆರಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ಸ್‍ಪೆಕ್ಟರ್ ಪುನೀತ್ ನೇತೃತ್ವದ ತಂಡ ಆದಿತ್ಯ ಆಳ್ವ ಅವರನ್ನು ಬಂಧಿಸಿ ಇಂದು ಮುಂಜಾನೆ ಬೆಂಗಳೂರಿಗೆ ಕರೆತಂದಿದ್ದು, ಮೊದಲು ಕೋವಿಡ್ ಟೆಸ್ಟ್‍ಗೆ ಒಳಪಡಿಸಿ ನಂತರ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಡ್ರಗ್ಸ್ ಪ್ರಕರಣದಲ್ಲಿ ಆದಿತ್ಯ ಆಳ್ವ ಆರನೆ ಆರೋಪಿ. ಪ್ರಕರಣ ದಾಖಲಾಗುತ್ತಿದ್ದಂತೆ ಆದಿತ್ಯ ಆಳ್ವ ಪೊಲೀಸರಿಗೆ ಸಿಗದೆ ತಲೆಮರೆಸಿ ಕೊಂಡಿದ್ದರು. ಶೋಧ ಮುಂದುವರಿಸಿದ ಪೊಲೀಸರು ಹೆಬ್ಬಾಳದಲ್ಲಿರುವ ಆಳ್ವ ಅವರ ಹೌಸ್ ಆಫ್ ಲೈಫ್ ಮೇಲೆ ದಾಳಿ ನಡೆಸಿದ್ದರೂ ಅವರು ಪತ್ತೆಯಾಗಿರಲಿಲ್ಲ.

ಆಳ್ವ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡ ರಚನೆ ಮಾಡಿದ್ದು, ಪೊಲೀಸರು ಅವರೊಂದಿಗೆ ಸಂಪರ್ಕ ಹೊಂದಿದ್ದ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಅವರಿಗೆ ಸೇರಿದ ಸದಾಶಿವನಗರ ಮತ್ತು ಬಿಡದಿ ಸಮೀಪದ ಮನೆಗಳ ಮೇಲೂ ಸಿಸಿಬಿ ಪೊಲೀಸರು ಶೋಧ ನಡೆಸಿದ್ದರು. ರಿಕ್ಕಿ ರೈ ಅವರನ್ನು ವಿಚಾರಣೆಗೊಳಪಡಿಸಿ ಕೆಲವು ಮಾಹಿತಿಗಳನ್ನು ಪಡೆದುಕೊಂಡಿದ್ದರು.

ಮುಂಬೈನಲ್ಲಿರುವ ಆಳ್ವ ಅವರ ಸಹೋದರಿ ಹಾಗೂ ಆಕೆಯ ಪತಿ, ಖ್ಯಾತ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ಮನೆಗೆ ಸಿಸಿಬಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ನಂತರ ಆದಿತ್ಯ ಆಳ್ವ ಅವರ ಸಹೋದರಿಯನ್ನು ವಿಚಾರಣೆಗೊಳಪಡಿಸಿ ಕೆಲವು ಮಾಹಿತಿಗಳನ್ನು ಸಂಗ್ರಹಿಸಿ ಬಂದಿದ್ದರು.

ಇದೀಗ ಆದಿತ್ಯ ಆಳ್ವ ಬಂಧನವಾಗಿರುವುದರಿಂದ ಆತನೊಂದಿಗೆ ಸಂಪರ್ಕ ಹೊಂದಿದ್ದವರಿಗೆ ಸಂಕಷ್ಟ ಎದುರಾಗಿದೆ. ಆದಿತ್ಯ ಆಳ್ವಾ ಪೇಜ್-3 ಪಾರ್ಟಿ ಆಯೋಜನೆ ಮಾಡುತ್ತಿದ್ದ ಎಂಬುದು ಸಿಸಿಬಿ ಪೊಲೀಸರ ತನಿಖೆಯಿಂದ ತಿಳಿದುಬಂದಿದ್ದು, ಅಂತಹ ಪಾರ್ಟಿಗಳಿಗೆ ಸೆಲೆಬ್ರಿಟಿಗಳನ್ನು ಆಹ್ವಾನಿಸುತ್ತಿದ್ದರು ಎಂಬ ಆರೋಪ ಸಹ ಇದೆ.

ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣದಲ್ಲಿ ಆದಿತ್ಯ ಆಳ್ವ ಹೆಸರು ಕೇಳಿ ಬಂದಿತ್ತು. ಸಿಸಿಬಿ ಪೊಲೀಸರು ಅವರ ಹೆಬ್ಬಾಳದಲ್ಲಿರುವ ರೆಸಾರ್ಟ್ ಮೇಲೆ ದಾಳಿ ಮಾಡುವ ಮೊದಲೇ ಅವರು ತಲೆಮರೆಸಿಕೊಂಡಿದ್ದರು. ದಾಳಿ ಸಂದರ್ಭದಲ್ಲಿ ಅವರ ರೆಸಾರ್ಟ್‍ನಲ್ಲಿ ಕೆಲವು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣದಲ್ಲಿ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಅವರು ಬಂಧಿತರಾಗಿದ್ದರು. ಸಂಜನಾ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

Facebook Comments

Sri Raghav

Admin