ಸಾವು-ನೋವು ಸಂಭವಿಸಿದ್ದರೆ ನಾನೇನು ಮಾಡಲಿಕ್ಕೆ ಆಗುತ್ತಿತ್ತು: ಬಾಂಬರ್ ಆದಿತ್ಯರಾವ್

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು, ಜ.24- ಬಚ್ಪೆ ವಿಮಾನ ನಿಲ್ದಾಣದಲ್ಲಿಟ್ಟಿದ್ದ ಬಾಂಬ್ ಸ್ಫೋಟಗೊಂಡು ಸಾವು-ನೋವು ಸಂಭವಿಸಿದ್ದರೆ ನಾನೇನು ಮಾಡಲಿಕ್ಕೆ ಆಗುತ್ತಿತ್ತು. ಹಾಗೋದಿದ್ದರೆ ಹಾಗೇ ಹಾಗುತ್ತಿತ್ತು….. ಹೀಗೆಂದು ಬಾಂಬರ್ ಆದಿತ್ಯರಾವ್ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಿದ್ದಾನೆ. ಮಂಗಳೂರು ಪೊಲೀಸರ ವಶದಲ್ಲಿರುವ ಆದಿತ್ಯವಾರ್ ವಿಚಾರಣೆ ತೀವ್ರಗತಿಯಲ್ಲಿ ನಡೆಯುತ್ತಿದೆ. ಪೊಲೀಸರ ಪ್ರಶ್ನೆಗಳಿಗೆ ಆದಿತ್ಯರಾವ್ ವಿಚಿತ್ರ ದಾಟಿಯಲ್ಲಿ ಉತ್ತರ ನೀಡುತ್ತಿದ್ದಾನೆ ಎಂದು ಗೊತ್ತಾಗಿದೆ.

ಮಂಗಳೂರು ಪೊಲೀಸರು ನನ್ನ ಬೆನ್ನು ಹತ್ತಿದ್ದು ಗೊತ್ತಾಗಿಯೇ ನಾನು ಬೆಂಗಳೂರಿಗೆ ಹೋಗಿ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಶರಣಾಗಿದ್ದಾಗಿ ಹೇಳಿದ್ದಾನೆ. ಬಾಂಬ್ ಪ್ರಕರಣ ಬೆಳಕಿಗೆ ಬಂದ ನಂತರ ಪೊಲೀಸರು ನನ್ನ ಸುಳಿವು ಹಿಡಿದು ಮಫ್ತಿಯಲ್ಲಿ ಹಿಂಬಾಲಿಸಲು ಆರಂಭಿಸಿದರು. ಹೊಸನಗರದಲ್ಲಿ ಪೊಲೀಸರು ನನ್ನನ್ನು ಹಿಂಬಾಲಿಸುತ್ತಿರುವುದನ್ನು ನಾನು ಗಮನಿಸಿದೆ. ಹಾಗಾಗಿ ಶರಣಾದೆ.

ಪೊಲೀಸ್ ಮಹಾನಿರ್ದೇಶಕರ ಎದುರು ಶರಣಾಗಿದ್ದೇಕೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಆದಿತ್ಯ ರಾವ್, ಅಲ್ಲಿ ಶರಣಾದರೆ ಹೊಡೆಯುವುದಿಲ್ಲ. ನನಗೆ ರಕ್ಷಣೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಶರಣಾದೆ ಎಂದು ಹೇಳಿದ್ದಾನೆ. ವಿಮಾನ ನಿಲ್ದಾಣದಲ್ಲಿಟ್ಟಿದ್ದ ಬಾಂಬ್ ಸ್ಫೋಟಗೊಂಡು ಸಾವು-ನೋವು ಸಂಭವಿಸಿದ್ದರೆ ಏನು ಮಾಡುತ್ತಿದ್ದೆ ಎಂದು ಪ್ರಶ್ನಿಸಿದಾಗ, ಏನು ಮಾಡೋಕೆ ಆಗುತ್ತೆ? ಹಾಗೋದಾದರೆ ಆಗ್ಲಿ ಎಂದು ಕೊಂಡಿದ್ದೆ.

ಬ್ಯಾಗಿನಲ್ಲಿ ತೆಗೆದುಕೊಂಡು ಹೋಗುವಾಗಲೇ ಸ್ಫೋಟಗೊಂಡು ನೀನೆ ಸತ್ತು ಹೋಗಿದ್ದರೆ ಎಂದು ಪ್ರಶ್ನಿಸಿದಾಗ, ಅದಕ್ಕೂ ನಾನು ಸಿದ್ದನಿದ್ದೆ. ನಾನಿದ್ದು ಏನು ಸಾಧಿಸಬೇಕಿತ್ತು ಎಂದು ಹೇಳಿದ್ದಾನೆ.

ಈವರೆಗಿನ ಪೊಲೀಸರ ತನಿಖೆಯಲ್ಲಿ ಕಂಡುಬಂದ ಅಂಶಗಳೆಂದರೆ ಆರೋಪಿ ಆದಿತ್ಯರಾವ್ ಮಂಗಳೂರಿನ ಕುಡ್ಲಾ ರೆಸ್ಟೋರೆಂಟ್‍ನಲ್ಲಿ ಕೆಲಸ ಮಾಡುವಾಗ ಶೇ.90ರಷ್ಟು ಬಾಂಬ್ ತಯಾರಿಸಿದ್ದ. ಕಾರ್ಕಳದ ಬಾರ್‍ಆ್ಯಂಡ್ ರೆಸ್ಟೋರೆಂಟ್‍ನಲ್ಲಿ ಕೆಲಸಕ್ಕೆ ಸೇರಿದ ಬಳಿಕ ಬಾಂಬನ್ನು ಪೂರ್ಣ ಪ್ರಮಾಣದಲ್ಲಿ ತಯಾರಿಸಿದ್ದ ಎಂದು ತಿಳಿದು ಬಂದಿದೆ.

ಬಾಂಬ್ ತಯಾರಿಕೆಗಾಗಿ ಆನ್‍ಲೈನ್‍ನಲ್ಲಿ 10 ರೀತಿಯ ಕಚ್ಛಾವಸ್ತುಗಳನ್ನು ಖರೀದಿಸಿದ್ದ. ಈವರೆಗೂ ಆದಿತ್ಯರಾವ್ ಒಂದು ಬಾಂಬ್ ಮಾತ್ರ ತಯಾರಿಸಿದ್ದಾನೆ ಎಂದು ಗೊತ್ತಾಗಿದೆ.
ತನಿಖೆ ಮುಂದುವರೆಸಿರುವ ಪೊಲೀಸರು ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಕ್ಷಣದಿಂದ ಆತ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಶರಣಾಗುವವರೆಗೂ ಎಲ್ಲಾ ಸ್ಥಳಗಳ ಮಹಜರ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

Facebook Comments