ವಿಶ್ವದಾದ್ಯಂತ 93.60 ಲಕ್ಷ ಕೊರೋನಾ ಸೋಂಕಿತರು, ಮೃತರ ಸಂಖ್ಯೆ 4.80 ಲಕ್ಷಕ್ಕೇರಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷ್ಟಿಂಗ್ಟನ್/ರಿಯೋ-ಡಿ-ಜನೈರೋ/ಮಾಸ್ಕೋ, ಜೂ.24 ವಿನಾಶಕಾರಿ ಕೋವಿಡ್-19 ದಾಳಿಯಿಂದ ವಿಶ್ವ ಕಂಗಾಲಾಗಿದ್ದು, ಒಟ್ಟು ಸಾವಿನ ಸಂಖ್ಯೆ 4.80 ಲಕ್ಷ ಹಾಗೂ ಸೋಂಕಿತರ ಸಂಖ್ಯೆ ಒಂದು ಕೋಟಿ ಸನಿಹ ತಲುಪಿದೆ..!

ಇದರ ನಡುವೆಯೂ ವಿಶ್ವದಲ್ಲಿ ಸುಮಾರು 50.48 ಲಕ್ಷ ರೋಗಿಗಳು ಚೇತರಿಸಿಕೊಂಡಿದ್ದಾರೆ ಅಥವಾ ಗುಣಮುಖರಾಗಿದ್ದಾರೆ.ನಿನ್ನೆ ಮಧ್ಯರಾತ್ರಿವರೆಗೆ ಲಭಿಸಿದ ಮಾಹಿತಿ ಪ್ರಕಾರ ಜಗತ್ತಿನಾದ್ಯಂತ ಈವರೆಗೆ 4,79,879 ಮಂದಿ ಸಾವಿಗೀಡಾಗಿದ್ದು, 93,59,372 ಸೋಂಕು ಪ್ರಕರಣಗಳು ವರದಿಯಾಗಿವೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 38.33 ಲಕ್ಷ ದಾಟಿದೆ. ಅಲ್ಲದೆ, ಇನ್ನೂ 58,119 ರೋಗಿಗಳ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುವ ಆತಂಕವಿದೆ. ನಾಳೆ ವೇಳೆಗೆ ಸಾವಿನ ಸಂಖ್ಯೆ 4.81 ಲಕ್ಷ ಮತ್ತು ಸಾಂಕ್ರಾಮಿಕ ರೋಗಿಗಳ ಪ್ರಮಾಣ 95 ಲಕ್ಷ ದಾಟುವ ಆತಂಕವಿದೆ.

ವ್ಯಾಪಕ ಸಾವು-ನೋವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಮಧ್ಯೆ ರೋಗಿಗಳ ಚೇತರಿಕೆ/ಗುಣಮುಖ ಪ್ರಮಾಣದಲ್ಲೂ ವೃದ್ದಿ ಕಂಡುಬಂದಿದೆ. ವಿಶ್ವದಲ್ಲಿ ಈವರೆಗೆ 50,46,273 ಮಂದಿ ರೋಗಿಗಳು ಚೇತರಿಸಿಕೊಂಡಿದ್ದಾರೆ ಮತ್ತು ಗುಣಮುಖರಾಗಿದ್ದಾರೆ. ಅಮೆರಿಕ, ಬ್ರೆಜಿಲ್, ರಷ್ಯಾ, ಭಾರತ ಮತ್ತು ಇಂಗ್ಲೆಂಡ್ ಕೊರೊನಾ ಕೇಸ್‍ಗಳಲ್ಲಿ ವಿಶ್ವದ ಟಾಪ್ ಫೈವ್ ದೇಶಗಳಾಗಿವೆ.

# ಅಮೆರಿಕದಲ್ಲಿ 24.24 ಲಕ್ಷ ಸೋಂಕಿತರು:
ಡೆಡ್ಲಿ ಕೋವಿಡ್-19 ವೈರಸ್ ದಾಳಿಯಿಂದ ತತ್ತರಿಸುತ್ತಿರುವ ಅಮೆರಿಕದಲ್ಲಿ ಮೃತರ ಸಂಖ್ಯೆ 1.24 ಲಕ್ಷ ಹಾಗೂ ರೋಗ ಪೀಡಿತರ ಸಂಖ್ಯೆ 24.24 ಲಕ್ಷ ದಾಟಿದೆ.

ನಿನ್ನೆ ಮಧ್ಯರಾತ್ರಿವರೆಗೆ ಲಭಿಸಿದ ಮಾಹಿತಿ ಪ್ರಕಾರ ಅಮೆರಿಕದಲ್ಲಿ ಈವರೆಗೆ 1,23,475 ಮಂದಿ ಮೃತಪಟ್ಟಿದ್ದು, ಇಂದು ಬೆಳಗಿನ ಮಾಹಿತಿ ಪ್ರಕಾರ ಮರಣ ಪ್ರಮಾಣ 1.24 ಲಕ್ಷ ದಾಟಿದೆ.

ಅಲ್ಲದೇ ಈವರೆಗೆ 24,24,418 ಅಮೆರಿಕನ್ನರು ಸಾಂಕ್ರಾಮಿಕ ರೋಗ ಪೀಡಿತರಾಗಿದ್ದಾರೆ. ಇವರಲ್ಲಿ 16,510ಕ್ಕೂ ಹೆಚ್ಚು ರೋಗಿಗಳ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವೂ ಮುಂದುವರಿದಿದೆ.

ಅಮೆರಿಕದಲ್ಲಿ ಈವರೆಗೆ ಸುಮಾರು 10,20,453 ಕೊರೊನಾ ಸೋಂಕು ರೋಗಿಗಳು ಚೇತರಿಸಿಕೊಂಡಿದ್ಧಾರೆ ಅಥವಾ ಗುಣಮುಖರಾಗಿದ್ದಾರೆ.
ಜಗತ್ತಿನ ಮಹಾ ಶಕ್ತಿಶಾಲಿ ದೇಶ ಅಮೆರಿಕ ಕೊರೊನಾ ಸೋಂಕು ಮತ್ತು ಸಾವಿನಲ್ಲಿ ಮೊದಲ ಸ್ಥಾನದಲ್ಲಿದ್ದು, ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ.

ಆ ರಾಷ್ಟ್ರದಲ್ಲಿ ಸುಮಾರು 11.52 ಲಕ್ಷ ಮಂದಿಗೆ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ 52,771ಕ್ಕೇರಿದೆ. ನಂತರದ ಸ್ಥಾನಗಳಲ್ಲಿ ರಷ್ಯಾ, ಭಾರತ ಮತ್ತು ಬ್ರಿಟನ್ ದೇಶಗಳಿವೆ.

Facebook Comments

Sri Raghav

Admin