ಬೆಂಗಳೂರಿನಲ್ಲಿ ಮತ್ತೆ ತಲೆ ಎತ್ತಿದ ಜಾಹೀರಾತುಗಳು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ .3- ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಬ್ಯಾನ್ ಆಗಿದ್ದ ಜಾಹೀರಾತುಗಳು ಮತ್ತೆ ತಲೆ ಎತ್ತಲು ಪ್ರಾರಂಭವಾಗಿವೆ. ನ್ಯಾಯಾಲಯದ ಆದೇಶವಿದ್ದರೂ ಅಕ್ರಮವಾಗಿ ಜಾಹೀರಾತು ಮಾಫಿಯ ರೆಕ್ಕೆ ಬಿಚ್ಚುತ್ತಿವೆ. ಬಸ್ ಶೆಲ್ಟರ್‍ಗಳ ನಿರ್ಮಾಣದ ಹೆಸರಲ್ಲಿ ನಗರದ ಅಂದವನ್ನು ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ. ನಗರದ ರಸ್ತೆಗಳಲ್ಲಿ ಜಾಹೀರಾತು ರಾರಾಜಿಸುತ್ತಿವೆ. ಸಾರ್ವಜನಿಕ- ಖಾಸಗಿ ಸಹಭಾಗಿತ್ವದ ಹೆಸರಲ್ಲಿ ಅನಧಿಕೃತವಾಗಿ ಜಾಹೀರಾತುಗಳು ತಲೆ ಎತ್ತಲಾರಂಭಿಸಿವೆ. ಬಿಬಿಎಂಪಿಯ ಕೆಲ ಭ್ರಷ್ಟ ಅಧಿಕಾರಿಗಳ ಲಂಚದ ಆಟಕ್ಕೆ ಹೈಕೋರ್ಟ್ ಆದೇಶವೂ ಉಲ್ಲಂಘನೆಯಾಗಿದೆ. ಜಾಹೀರಾತುಗಳನ್ನು ಅಳವಡಿಸಲೆಂದೇ ಸಾವಿರಾರು ಬಸ್ ಶೆಲ್ಟರ್‍ಗಳು ತಲೆ ಎತ್ತಿವೆ.

ಒಂದೇ ರಸ್ತೆಯಲ್ಲಿ 10ಕ್ಕೂ ಹೆಚ್ಚು ಬಸ್ ತಂಗುದಾಣಗಳು ಕಾಣುತ್ತಿವೆ. ನಿಲ್ದಾಣಗಳು ಇಲ್ಲದ ಕಡೆ ಫುಟ್‍ಪಾತ್‍ಗಳ ಮೇಲೆ ಅರ್ಧಂಬರ್ದ ಇರುವ ಶೆಲ್ಟರ್‍ಗಳಲ್ಲೇ ಜಾಹೀರಾತು ಫಲಕಗಳು ರಾರಾಜಿಸುತ್ತಿವೆ. ನಗರದ ಚಿನ್ನಸ್ವಾಮಿ ಸ್ಟೇಡಿಯಂ ಪಕ್ಕದ ರಾಜಭವನ-ಕ್ವೀನ್ಸ್ ರಸ್ತೆಯಲ್ಲಿ ಬಸ್ ನಿಲ್ದಾಣಗಳು ಇರುವುದು ಎರಡು ಮಾತ್ರ. ಆದರೆ, 10ಕ್ಕೂ ಹೆಚ್ಚು ಬಸ್ ಶೆಲ್ಟರ್‍ಗಳನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಪ್ರಯಾಣಿಕರ ಕಾಳಜಿಗಿಂತ ಜಾಹೀರಾತು ಪ್ರದರ್ಶನವೇ ಮುಖ್ಯವಾಗಿದೆ. ಇದರಿಂದಾಗಿ ನಗರದ ಸೌಂದರ್ಯಕ್ಕೆ ಮಾರಕವಾಗಿದೆ. ಹಾಗಾಗಿ ನ್ಯಾಯಾಲಯ ಜಾಹೀರಾತುಗಳನ್ನು ಬ್ಯಾನ್ ಮಾಡಿದೆ.

ಆದರೂ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಜಾಹೀರಾತು ಹಾಕಲು ಬಿಬಿಎಂಪಿ ಅನುಮತಿ ನೀಡುತ್ತಿದೆ. ಇದನ್ನು ದುರ್ಬಳಕೆ ಮಾಡಿಕೊಂಡ ಕೆಲವರು ನಗರದಾದ್ಯಂತ ಎಲ್ಲೆಂದರಲ್ಲಿ ಜಾಹೀರಾತು ಫಲಕ ಅಳವಡಿಸಲು ಪ್ರಯತ್ನ ನಡೆಸಿದ್ದಾರೆ. ಸದ್ಯ ನಗರದಾದ್ಯಂತ 2250 ಬಸ್ ಶೆಲ್ಟರ್‍ಗಳಿಗೆ ಪಿಪಿಪಿ ಮಾದರಿಯಲ್ಲಿ ಪಾಲಿಕೆ ಅನುಮತಿ ನೀಡಿದೆ.

ನಾಲ್ಕು ಪ್ಯಾಕೇಜ್‍ಗಳಲ್ಲಿ ನಿರ್ಮಾಣವಾಗಿರುವ ಬಸ್ ಶೆಲ್ಟರ್‍ಗಳು ಅತ್ಯಗತ್ಯ ಇರುವ ಕಡೆ ನಿರ್ಮಾಣವಾಗದೆ ಎಲ್ಲೆಲ್ಲಿ ಜನ ಜಾಹೀರಾತು ವೀಕ್ಷಿಸುತ್ತಾರೋ ಅಂತಹ ಕಡೆಗಳಲ್ಲಿ ಹತ್ತಾರು ಶೆಲ್ಟರ್‍ಗಳನ್ನು ನಿರ್ಮಾಣ ಮಾಡಲಾಗಿದೆ. ಇದು ನಿಜಕ್ಕೂ ದುರ್ದೈವ. ಪಾಲಿಕೆ ಅಧಿಕಾರಿಗಳೇ ಇದಕ್ಕೆ ಕುಮ್ಮಕ್ಕು ನೀಡಿದ್ದು, ಜಾಹೀರಾತು ಮಾಫಿಯಾದ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಒಟ್ಟಾರೆ ರಾಜ್ಯದ ರಾಜಧಾನಿ, ಉದ್ಯಾನನಗರಿ ಬೆಂಗಳೂರಿನಲ್ಲಿ ಜಾಹೀರಾತು ಮಾಫಿಯಾವೇ ಇದೆ. ಸ್ವಲ್ಪ ಅನುಮತಿ ಸಿಕ್ಕರೆ ಸಾಕು ಇಡೀ ನಗರವನ್ನೇ ಜಾಹೀರತು ಫಲಕಗಳಿಂದ ಮುಳುಗಿಸವ ಶಕ್ತಿ ಈ ಮಾಫಿಯಾಗೆ ಇದೆ. ನ್ಯಾಯಾಲಯದ ಆದೇಶಕ್ಕೂ ಕವಡೆಕಾಸಿನ ಕಿಮ್ಮತ್ತು ನೀಡದ ಈ ಜಾಹೀರಾತು ಮಾಫಿಯಾಕ್ಕೆ ಕಡಿವಾಣ ಹಾಕುವ ಅಗತ್ಯವಿದೆ.

Facebook Comments