ಇನ್ನು ಮುಂದೆ ಬೆಳಗ್ಗೆ 10.30ಕ್ಕೆ ಕಲಾಪ ಆರಂಭಿಸಲು ಸದನ ಸಲಹಾ ಸಮಿತಿ ತೀರ್ಮಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.1- ಇನ್ನು ಮುಂದೆ ಕಲಾಪವನ್ನು ಬೆಳಗ್ಗೆ 10.30ಕ್ಕೆ ಆರಂಭಿಸುವುದು, ಇದೇ 4ರಂದು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರ ಹಾಗೂ ಒಂದು ರಾಷ್ಟ್ರ-ಒಂದು ಚುನಾವಣೆ ವಿಷಯವನ್ನು ಮುಂದಿನ ಅಧಿವೇಶನದಲ್ಲಿ ಚರ್ಚೆ ಕೈಗೆತ್ತಿಕೊಳ್ಳಲು ಇಂದು ನಡೆದ ಸದನ ಸಲಹಾ ಸಮಿತಿ ತೀರ್ಮಾನಿಸಿದೆ. ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡ ಕಾಗೇರಿ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ್ ಬೊಮ್ಮಾಯಿ ಅವರಿದ್ದ ಸಭೆಯಲ್ಲಿ ಈ ತೀರ್ಮಾನವನ್ನುಕೈಗೊಳ್ಳಲಾಗಿದೆ.

ಇನ್ನುಮುಂದೆ 11 ಗಂಟೆ ಬದಲಾಗಿ ಕಲಾಪವನ್ನು ಪ್ರತಿನಿತ್ಯ 10.30ಕ್ಕೆ ಆರಂಭಿಸಬೇಕು. ಜಂಟಿ ಅಧಿವೇಶನವು ಇದೇ 5ರವರೆಗೆ ನಡೆಯಲಿದ್ದು, 4ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಂದನಾ ನಿರ್ಣಯದ ಮೇಲೆ ಉತ್ತರ ನೀಡಲಿದ್ದಾರೆ ಎಂದು ಸಭಾಧ್ಯಕ್ಷರು ಪ್ರಕಟಿಸಿದರು. ಇದೇ ಅಧಿವೇಶನದಲ್ಲಿ ಒಂದು ರಾಷ್ಟ್ರ-ಒಂದು ಚುನಾವಣೆ ವಿಷಯವನ್ನು ಚರ್ಚೆ ಕೈಗೊಳ್ಳಬೇಕಾಗಿತ್ತು.

ಮುಂದಿನ ಅಧಿವೇಶನ ಪ್ರಾರಂಭವಾದ ಮೊದಲ ಎರಡು ದಿನದಲ್ಲಿ ಇದೇ ವಿಷಯದ ಬಗ್ಗೆ ಚರ್ಚೆ ಮಾಡಲಾಗುವುದು. ಆ ವೇಳೆ ಬೇರೆ ಯಾವುದೇ ವಿಷಯಗಳು ಚರ್ಚೆಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಇನ್ನು ಮುಂದೆ ಸದನದಲ್ಲಿ ಮಂಡಿಸಬೇಕಾದ ಯಾವುದೇ ವಿಧೇಯಕಗಳನ್ನು ಸದಸ್ಯರ ಗಮನಕ್ಕೆ ತರದೆ ಏಕಾಏಕಿ ಮಂಡಿಸುವುದಾದರೆ ನಾವು ಸಭೆಗೆ ಬರುವುದಿಲ್ಲ ಎಂದು ಸಿದ್ದರಾಮಯ್ಯ ಪಟ್ಟು ಹಿಡಿದರು ಎಂದು ಗೊತ್ತಾಗಿದೆ.

ಕಳೆದ ಅಧಿವೇಶನದ ಸಂದರ್ಭದಲ್ಲಿ ಕರ್ನಾಟಕ ಗೋ ಹತ್ಯೆ ನಿಷೇಧ ಕಾಯ್ದೆ ಮಂಡನೆ ಮಾಡುವ ಬಗ್ಗೆ ನಮಗೆ ಮಾಹಿತಿ ನೀಡಲಿಲ್ಲ. ನಿಯಮಗಳ ಪ್ರಕಾರ ಸದನದಲ್ಲಿ ಯಾವುದೇ ಮಸೂದೆಯನ್ನು ಮಂಡಿಸಬೇಕಾದರೆ ಸದಸ್ಯರ ಗಮನಕ್ಕೆ ತರಬೇಕು. ಮುಂದೆ ಇಂತಹ ಪ್ರಮಾದಗಳು ಉಂಟಾಗದಂತೆ ಸರ್ಕಾರ ಎಚ್ಚರವಹಿಸಬೇಕೆಂದು ಸಲಹೆ ಮಾಡಿದ್ದಾರೆ.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಗೃಹ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ್ ಬೊಮ್ಮಾಯಿ, ಮುಂದೆ ಇಂತಹ ಪ್ರಮಾದಗಳು ಉಂಟಾಗದಂತೆ ನೋಡಿಕೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ.

Facebook Comments