ಶಿವಮೊಗ್ಗ ಆಯ್ತು ಈಗ ಬಳ್ಳಾರಿಯಲ್ಲೂ ಆಫ್ರಿಕಾ ವೈರಸ್ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬಳ್ಳಾರಿ,ಮಾ.12-ಶಿವಮೊಗ್ಗದಲ್ಲಿ ಆಫ್ರಿಕಾ ಮಾದರಿಯ ಸೋಂಕು ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿರುವ ಬೆನ್ನಲ್ಲೇ ಗಣಿ ಜಿಲ್ಲೆ ಬಳ್ಳಾರಿಗೂ ಈ ಮಹಾಮಾರಿ ಕಾಲಿಟ್ಟಿದೆ. ದುಬೈನಿಂದ ಬಂದಿದ್ದ ಓರ್ವ ವ್ಯಕ್ತಿಗೆ ಆಫ್ರಿಕಾ ಮಾದರಿಯ ಸೋಂಕು ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಆತಂಕ ನಿರ್ಮಾಣವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕುಟುಂಬ ಸದಸ್ಯರಿಗೆ ಹೋಂ ಕ್ವಾರಂಟೈನ್ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ದುಬೈನಿಂದ ಇಬ್ಬರು ಬೆಂಗಳೂರಿಗೆ ಹಿಂತಿರುಗಿದ್ದರು. ವಿಮಾನ ನಿಲ್ದಾಣದಲ್ಲೇ ಇವರನ್ನು ಪರೀಕ್ಷೆಗೊಳಪಡಿಸಿದಾಗ ನೆಗೆಟಿವ್ ಬಂದಿತ್ತು. ಪುನಃ ಬಳ್ಳಾರಿಯಲ್ಲಿ ಪರೀಕ್ಷೆ ನಡೆಸಿದಾಗ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು.

ಇದನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಿದಾಗ ಓರ್ವ ವ್ಯಕ್ತಿಯಲ್ಲಿ ಆಫ್ರಿಕಾ ಮಾದರಿಯ ಸೋಂಕು ಕಾಣಿಸಿಕೊಂಡಿರುವುದು ದೃಢಪಟ್ಟಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಲಪಾಟಿ ಖಚಿತಪಡಿಸಿದ್ದಾರೆ.

ಈತನ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪತ್ತೆಹಚ್ಚುವ ಕಾರ್ಯ ಮುಂದುವರೆದಿದೆ. ಅಲ್ಲದೆ ಆತನ ಕುಟುಂಬದವರನ್ನು ಹೋಂ ಕ್ವಾರಂಟೈನ್ ಹಾಗೂ ಐಸೋಲೇಟ್ ಮಾಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಮುನ್ನೆಚ್ಚರಿಕೆಯಾಗಿ ಆತನ ಜೊತೆ ಬಂದ ವ್ಯಕ್ತಿಯನ್ನು ಸಹ ಚಿಕಿತ್ಸೆಗೊಳಪಡಿಸಲಾಗಿದೆ.

ಅಲ್ಲದೆ ಆತನ ಸಂಪರ್ಕದಲ್ಲಿದ್ದ ಎಲ್ಲರೂ ಕಡ್ಡಾಯವಾಗಿ ಪರೀಕ್ಷೆಗೊಳಪಡಿಸಿಕೊಳ್ಳಬೇಕು, ಅಲ್ಲದೆ ಈ ವ್ಯಕ್ತಿಯು ವಾಸ ಮಾಡುತ್ತಿರುವ ಪ್ರದೇಶಕ್ಕೆ ಸಾರ್ವಜನಿಕರು ಪ್ರವೇಶಿಸದಂತೆ ನಿರ್ಬಂಧ ಹಾಕಲಾಗಿದೆ. ಸಾರ್ವಜನಿಕರು ಆತಂಕಪಡಬಾರದೆಂದು ಮನವಿ ಮಾಡಲಾಗಿದೆ.

Facebook Comments

Sri Raghav

Admin