ಭಾರೀ ಬಿಗಿ ಭದ್ರತೆ ನಡುವೆ ತೆಲಂಗಾಣ, ರಾಜಸ್ತಾನ ಮತದಾನ

ಈ ಸುದ್ದಿಯನ್ನು ಶೇರ್ ಮಾಡಿ

Telangana--01

ಹೈದರಾಬಾದ್/ಜೈಪುರ್, ಡಿ.7-ಮುಂಬರುವ ಲೋಕಸಭಾ ಸಮರದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಅಂತಿಮ ಹಂತವಾಗಿ ಇಂದು ತೆಲಂಗಾಣ ಮತ್ತು ರಾಜಸ್ತಾನ ರಾಜ್ಯಗಳಲ್ಲಿ ಭಾರೀ ಬಿಗಿ ಭದ್ರತೆ ನಡುವೆ ಮತದಾನ ನಡೆದಿದೆ. ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದಂತೆ ಚುನಾವಣೆ ಬಹುತೇಕ ಶಾಂತಿಯುತವಾಗಿತ್ತು.

ಈ ಎರಡೂ ರಾಜ್ಯಗಳ ಕೆಲವೆಡೆ ವಿದ್ಯುನ್ಮಾತ ಮತ ಯಂತ್ರಗಳ(ಇವಿಎಂಗಳು) ದೋಷದಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಬೆಳಗ್ಗೆಯಿಂದಲೇ ಮತದಾನ ಆರಂಭವಾಗಿದ್ದು, ಮತಗಟ್ಟೆಗಳ ಮುಂದೆ ಮತದಾರರ ಸಾಲುಗಟ್ಟಿ ನಿಂತು ತಮ್ಮ ಹಕ್ಕುಗಳನ್ನು ಚಲಾಯಿಸುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಬೆಳಗ್ಗಿನ ಚಳಿ ಕಾರಣ ಆರಂಭದಲ್ಲಿ ನಿರಸವಾಗಿದ್ದ ಮತದಾನ ಬಿಸಿಲೇರುತ್ತಿದ್ದಂತೆ ಬಿರುಸುಗೊಂಡಿತು.

# ಹೈದರಾಬಾದ್ ವರದಿ:
ತೆಲಂಗಾಣ ವಿಧಾನಸಭೆಯ 119 ಕ್ಷೇತ್ರಗಳಿಗೆ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ, ಟಿಆರ್‍ಎಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಒಂದೇ ಹಂತದಲ್ಲಿ ನಡೆಯುವ ಮತದಾನದಲ್ಲಿ ಸುಮಾರು 2.80 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಒಟ್ಟು 32,815 ಮತಗಟ್ಟೆಗಳನ್ನು ತೆರೆಯಲಾಗಿದೆ. ಒಂದೂವರೆ ಲಕ್ಷಕ್ಕೂ ಅಧಿಕ ಸಿಬ್ಬಂದಿ ಮತದಾನ ಪ್ರಕ್ರಿಯೆಯ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.

ಬುಧವಾರ ಸಂಜೆ 5 ಗಂಟೆಗೆ ಬಹಿರಂಗ ಚುನಾವಣಾ ಪ್ರಚಾರ ಅಂತ್ಯಗೊಂಡಿತ್ತು. ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿಯ ಘಟಾನುಘಟಿಗಳು ಸ್ಪರ್ಧಾಕಣದಲ್ಲಿದ್ದಾರೆ. ಕೆಟಿ ರಾಮರಾವ್, ಹರೀಶ್ ರಾವ್, ಕಾಂಗ್ರೆಸ್‍ನಿಂದ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ, ರೇವಂತ್ ರೆಡ್ಡಿ ಕಣದಲ್ಲಿದ್ದಾರೆ.  ಟಾಲಿವುಡ್ ಖ್ಯಾತ ನಟ ಅಲ್ಲು ಅರ್ಜುನ್ ಹೈದರಾಬಾದ್ ನ ಜ್ಯುಬಿಲಿ ಹಿಲ್ಸ್‍ನಲ್ಲಿರುವ ಬೂತ್ ಸಂಖ್ಯೆ 152ಕ್ಕೆ ಆಗಮಿಸಿ ಮತ ಚಲಾಯಿಸಿದರು. ಇನ್ನೊಂದೆಡೆ ನಟ ಅಕ್ಕಿನೇನಿ ನಾಗಾರ್ಜುನ ಮತ್ತು ಅವರ ಪತ್ನಿ ನಟಿ ಅಮಲಾ ಅಕ್ಕಿನೇನಿ ಜ್ಯುಬಿಲಿ ಹಿಲ್ಸ್‍ನ ಮತಗಟ್ಟೆ ಸಂಖ್ಯೆ 151ಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

# ಜೈಪುರ ವರದಿ:
ರಾಜಸ್ತಾನದ 199 ವಿಧಾನಸಭಾ ಸ್ಥಾನಗಳಿಗೆ ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಯಿತು. 2 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಬಾರಿ ಕಣಕ್ಕಿಳಿದಿದ್ದಾರೆ. ಆಡಳಿತಾರೂಢ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆಯೇ ಅಥವಾ ಕಾಂಗ್ರೆಸ್ ಅಧಿಕಾರ ಪಡೆಯುತ್ತದೆಯೇ ಎಂಬುದು ಇಂದಿನ ಮತದಾನದಲ್ಲಿ ನಿರ್ಧಾರವಾಗಲಿದೆ.

ರಾಜ್ಯದ 51,687 ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದ್ದು, 259 ಮಂದಿ ಮಹಿಳಾ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಇದ್ದಾರೆ.130 ಸ್ಥಾನಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ವಸುಂಧರಾ ರಾಜೆ ಮತ್ತೆ ಮುಖ್ಯಮಂತ್ರಿಯಾಗುವ ಭರವಸೆ ಹೊಂದಿದ್ದರೆ, ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಿಎಂ ಪದವಿ ಗಿಟ್ಟಿಸಿಕೊಳ್ಳುವ ಕನಸು ಕಾಣುತ್ತಿದ್ದಾರೆ.

ತಮ್ಮ ಕ್ಷೇತ್ರದಲ್ಲಿ ಮತ ಚಲಾಯಿಸಿದ ನಂತರ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸವನ್ನು ವಸುಂಧರಾ ರಾಜೆ ವ್ಯಕ್ತಪಡಿಸಿದರು. ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಪರಿಗಣಿತವಾಗಿರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ತೆಲಂಗಾಣ ಮತ್ತು ರಾಜಸ್ತಾನ ರಾಜ್ಯಗಳೂ ಸಹ ಪ್ರಮುಖ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ನ.12 ಮತ್ತು 20ರಂದು 91 ಸ್ಥಾನಗಳ ಛತ್ತೀಸ್‍ಗಢ ವಿಧಾನಸಭೆಗೆ ಚುನಾವಣೆ ನಡೆದಿತ್ತು. ನ.28ರಂದು ಮಧ್ಯಪ್ರದೇಶ(231) ಹಾಗೂ ಮಿಜೋರಾಂ (40) ರಾಜ್ಯಗಳಲ್ಲಿ ಮತದಾನವಾಗಿತ್ತು. ಡಿ.11ರಂದು ಈ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು, ಭಾರೀ ಕುತೂಹಲ ಕೆರಳಿಸಿದೆ.

Facebook Comments

Sri Raghav

Admin