ಮೋದಿ ಶಾಕ್‌ಗೆ ಇಂಗು ತಿಂದ ಮಂಗನಂತಾದ ಪಾಕ್‌ನಿಂದ ಮತ್ತೊಂದು ಸೇಡಿನ ಕ್ರಮ..!

ಈ ಸುದ್ದಿಯನ್ನು ಶೇರ್ ಮಾಡಿ

ಇಸ್ಲಾಮಾಬಾದ್, ಆ.10- ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ ಭಾರತೀಯ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಭಾರತ ಸರ್ಕಾರದ ವಿರುದ್ಧ ಪಾಕಿಸ್ತಾನದ ಸೇಡಿನ ಕ್ರಮಗಳು ಮುಂದುವರೆದಿದೆ.

ದೆಹಲಿ ಮತ್ತು ಲಾಹೋರ್ ನಡುವೆ 1999ರಿಂದ ಆರಂಭವಾಗಿದ್ದ ಬಸ್ ಸಂಚಾರವನ್ನು ನಿಲ್ಲಿಸಲು ಪಾಕಿಸ್ತಾನ ನಿರ್ಧರಿಸಿದೆ. ರಾಷ್ಟ್ರೀಯ ಭದ್ರತಾ ಸಭೆ ನಂತರ ಪಾಕಿಸ್ತಾನದ ಸಂಪರ್ಕ ಖಾತೆ ಸಚಿವ ಮುರಾದ್ ಸೈಯಿದ್ ಈ ವಿಷಯ ತಿಳಿಸಿದ್ದು ದೆಹಲಿ-ಲಾಹೋರ್ ಸೌಹಾರ್ದ ಬಸ್ ಸೇವೆಗಳನ್ನು ಬಂದ್ ಮಾಡುವುದಾಗಿ ತಿಳಿಸಿದ್ದಾರೆ.

ಭಾರತ-ಪಾಕಿಸ್ತಾನದ ನಡುವಣ ಥಾರ್ ಏಕ್ಸ್‍ಪ್ರೆಸ್ ಮತ್ತು ಸಂಜೋತಾ ಏಕ್ಸ್‍ಪ್ರೆಸ್ ರೈಲು ಸಂಚಾರವನ್ನು ಇಸ್ಲಾಮಾಬಾದ್ ರದ್ದು ಗೊಳಿಸಿದ ನಂತರ ಇದು ಮತ್ತೊಂದು ಸೇಡಿನ ಕ್ರಮವಾಗಿದೆ.

ಇದಲ್ಲದೆ ಪಾಕಿಸ್ತಾನದ್ಯಂತ ಬಾಲಿವುಡ್ ಸೇರಿದಂತೆ ಭಾರತೀಯ ಸಿನಿಮಾಗಳ ಪ್ರದರ್ಶನವನ್ನು ರದ್ದುಗೊಳಿಸುವುದಾಗಿ ಸರ್ಕಾರ ಪ್ರಕಟಿಸಿದೆ. ಪಾಕಿಸ್ತಾನದಲ್ಲಿ ಭಾರತದ ಸಿನಿಮಾಗಳು, ನಾಟಕಗಳು ಮತ್ತು ಕಿರುಚಿತ್ರ ಅಥವಾ ಯಾವುದೇ ಇಂಡಿಯನ್ ಕಂಟೆಂಟ್‍ಗಳ ಪ್ರದರ್ಶನಕ್ಕೆ ಅವಕಾಶ ನೀಡುದಿಲ್ಲ ಎಂದು ಪಾಕ್ ಪ್ರಧಾನಮಂತ್ರಿ ಮಾಧ್ಯಮ ಸಲಹೆಗಾರ ಫಿರ್ದೋಸ್ ಆಶಿಕ್ ಆಹ್ವಾನ್ ತಿಳಿಸಿದ್ದಾರೆ.

ಭಾರತ-ಪಾಕಿಸ್ತಾನ ಗಡಿಭಾಗದಲ್ಲಿರುವ ವಾಘಾ ಸರಹದ್ದಿನ ಮೂಲಕ ಆಫ್ಘಾನಿಸ್ತಾನವೂ ಭಾರತದಿಂದ ಆಮದು ಮಾಡಿಕೊಳ್ಳುವ ಅಗತ್ಯ ವಸ್ತುಗಳ ಮಾರ್ಗವನ್ನು ಬಂದ್ ಮಾಡುವುದಾಗಿ ಪಾಕಿಸ್ತಾನ ನಿನ್ನೆಯಷ್ಟೆ ಘೋಷಿಸಿತ್ತು.

ಇದರೊಂದಿಗೆ ಭಾರತ ಮತ್ತು ಆಫ್ಘಾನ್ ನಡುವೆ ವಾಣಿಜ್ಯ-ವ್ಯಾಪಾರ-ವಹಿವಾಟು ಬಂದಾಗಲಿದ್ದು, ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಪಾಕ್ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರ ವಾಣಿಜ್ಯ ಸಲಹೆಗಾರ ಅಬ್ದುಲ್ ರಜಾಖ್ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿ ಇನ್ನು ಮುಂದೆ ವಾಘ ಗಡಿ ಮೂಲಕ ಭಾರತ ಮತ್ತು ಆಫ್ಘಾನಿಸ್ತಾನ ವ್ಯಾಪಾರ-ವಹಿವಾಟಿಗೆ ನಾವು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಮಾರ್ಗವು ಇನ್ನು ಮುಂದೆ ದ್ವಿಪಕ್ಷೀಯ ವಹಿವಾಟು ಮಾರ್ಗವಾಗಲಿದೆ. ಹೊರತು ತ್ರಿಪಕ್ಷೀಯ ಮಾರ್ಗವಾಗಿ ಮುಂದುವರೆಯುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

370ನೇ ವಿಧಿ ರದ್ಧತಿ ನಂತರ ಭಾರತದ ವಿರುದ್ಧ ಸೇಡಿನ ಕ್ರಮವಾಗಿ ಪಾಕಿಸ್ತಾನ ನಿನ್ನೆಯಷ್ಟೆ ರಾಯಭಾರಿಯನ್ನು ಇಸ್ಲಾಮಾಬಾದ್‍ನಿಂದ ಉಚ್ಛಾಟಿಸಿ ದೆಹಲಿಯೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿತ್ತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin