ಕೃಷಿ ಮಾರಾಟ ಮಂಡಳಿಯಲ್ಲಿ 50 ಕೋಟಿ ಗೋಲ್‍ಮಾಲ್ : ಕಿಂಗ್‍ಪಿನ್ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.2- ರಾಜ್ಯ ಕೃಷಿ ಮಾರಾಟ ಮಂಡಳಿಯ ವಂಚನೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಮೂಲತಃ ಚೆನ್ನೈನ ವಿಜಯ್ ಆಕಾಶ್ (57), ಪ್ರೇಮ್‍ರಾಜ್ (32) ಮತ್ತು ದಿನೇಶ್ ಬಾಬುಜಿ (30) ಬಂಧಿತರು.

ಕರ್ನಾಟಕ ರಾಜ್ಯದ ರೈತರಿಗೆ ಮಾರುಕಟ್ಟೆಯಲ್ಲಿ ಕೃಷಿ ಉತ್ಪಾದನೆಗಳ ದರಗಳಲ್ಲಿ ನಷ್ಟವಾದ ಸಂದರ್ಭದಲ್ಲಿ ಸರ್ಕಾರವು ರೈತರಿಗೆ ಬೆಂಬಲ ಬೆಲೆ ಒದಗಿಸಲು ಆವರ್ತನಿಧಿ (ರಿವಾಲ್ವಿಂಗ್ ಫಂಡ್) ಹಣವನ್ನು ಇಡಲಾಗಿತ್ತು. ಆರೋಪಿಗಳು 2019ನೆ ಸಾಲಿನ ನವೆಂಬರ್‍ನಲ್ಲಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯಲ್ಲಿ ಇದ್ದ ಹೆಚ್ಚುವರಿ 100 ಕೋಟಿ ರೂ.ಗಳನ್ನು ಸಿಂಡಿಕೇಟ್ ಬ್ಯಾಂಕ್ ಉತ್ತರಹಳ್ಳಿ ಶಾಖೆಗೆ ಒಂದು ವರ್ಷದ ಅವಧಿಗೆ ಶೇ.6ರಂತೆ ನಿಶ್ಚಿತ ಠೇವಣಿಗಾಗಿ ವರ್ಗಾವಣೆ ಮಾಡಲಾಗಿತ್ತು.

50 ಕೋಟಿ ರೂ.ಗಳನ್ನು ನಕಲಿ ಅಧಿಕಾರಿಯ ಹೆಸರಿನಲ್ಲಿ ಠೇವಣಿ ಇಟ್ಟು ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್, ಮಂಡಳಿಯ ಡಿಜಿಎಂ ಮತ್ತಿತರರು ಶಾಮೀಲಾಗಿ ತಮಿಳುನಾಡಿನ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆಂಬ ಆರೋಪ ಕೇಳಿಬಂದಿತ್ತು.

ಈ ಬಗ್ಗೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದಾಗಿನಿಂದ ಈ ಆರೋಪಿಗಳು ತಲೆಮರೆಸಿಕೊಂಡಿದ್ದರು. ಸಿಸಿಬಿ ಪೊಲೀಸರು ಈ ಪ್ರಕರಣದ ತನಿಖೆ ಕೈಗೊಂಡು ಒಟ್ಟು 15 ಆರೋಪಿಗಳನ್ನು ಈಗಾಗಲೇ ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದಾರೆ.

ತಲೆಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದ ಸಿಸಿಬಿ ಪೊಲೀಸರು ಮುಖ್ಯ ಆರೋಪಿ ಸೇರಿದಂತೆ ಇನ್ನಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಖ್ಯ ಆರೋಪಿ ವಿಜಯ್ ಆಕಾಶ್ ಎಂಬಾತನ ವಿರುದ್ಧ ಈಗಾಗಲೇ ಹೈದರಾಬಾದ್, ತಿರುಪತಿ, ಕೊಯಮತ್ತೂರಿನಲ್ಲಿ ಪ್ರಕರಣಗಳು ದಾಖಲಾಗಿ ವಿಚಾರಣೆಯಲ್ಲಿವೆ.

ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಉಪ ಪೊಲೀಸ್ ಆಯುಕ್ತ ಬಿ.ಎಸ್.ಅಂಗಡಿ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಆಯುಕ್ತ ಜಗನ್ನಾಥ್ ರೈ ನೇತೃತ್ವದಲ್ಲಿ ಸಿಸಿಬಿ ಇನ್‍ಸ್ಪೆಕ್ಟರ್ ಪುನೀತ್‍ಕುಮಾರ್, ಸಿಬ್ಬಂದಿಗಳಾದ ಭೈರೇಶ್, ಶಾಂತಕುಮಾರ್, ವಿಜಯ್‍ಕುಮಾರ್ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments